ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಆರಂಭವಾಗಿದೆ ಕಸರತ್ತು! ಇಂದು ಸಂಜೆ ರಾಜ್ಯಪಾಲರ ಭೇಟಿ
ಮಂಗಳವಾರ, 15 ಮೇ 2018 (14:29 IST)
ಬೆಂಗಳೂರು: ಅತ್ತ ಬಿಜೆಪಿ ಗೆಲುವಿನ ಸಂಭ್ರಮದಲ್ಲಿ ಮೈಮರೆತಿದ್ದರೆ, ಇತ್ತ ಕಾಂಗ್ರೆಸ್ ಜೆಡಿಎಸ್ ಜತೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಲು ಮುಂದಾಗಿದೆ.
ಇಂದು ಸಂಜೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಯೋಗ ರಾಜ್ಯಪಾಲರ ಭೇಟಿಗೆ ತಯಾರಿ ನಡೆಸಿದೆ ಎನ್ನಲಾಗಿದೆ. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಕುಮಾರಸ್ವಾಮಿಗೆ ಪಟ್ಟ ಕಟ್ಟಲು ರೆಡಿಯಾಗಿದೆ.
ಇದರೊಂದಿಗೆ ಚುನಾವಣೆಗೆ ಮೊದಲು ಜೆಡಿಎಸ್ ವರಿಷ್ಠ ದೇವೇಗೌಡರು ನಮ್ಮನ್ನು ಬಿಟ್ಟು ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬ ಮಾತು ನಿಜವಾಗುತ್ತಿದೆ. ಬಿಬಿಎಂಪಿಯಂತೆ ವಿಧಾನಸಭೆಯಲ್ಲೂ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ಎರಡೂ ಪಕ್ಷಗಳು ತಂತ್ರ ನಡೆಸಿವೆ ಎನ್ನಲಾಗಿದೆ.
ಇಂದು ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ದೇವೇಗೌಡರು ಕರೆದಿದ್ದು, ಅದರಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನವಾಗುವ ಸಾಧ್ಯತೆಯಿದೆ. ಇದರಿಂದಾಗಿ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ. ಒಂದು ವೇಳೆ ರಾಜ್ಯಪಾಲರು ಹೆಚ್ಚು ಸ್ಥಾನ ಗಳಿಸಿದ ಪಕ್ಷಕ್ಕೆ ಮೊದಲು ಆದ್ಯತೆ ಎಂದರೆ ಪರಿಸ್ಥಿತಿ ಏನಾಗಬಹುದು ಎಂದು ನೋಡಬೇಕಿದೆ. ಅಂತೂ ಮತ್ತೊಂದು ರಾಜಕೀಯ ಮೇಲಾಟಕ್ಕೆ ಈ ಚುನಾವಣೆ ಸಾಕ್ಷಿಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.