ಪ್ರಮಾಣ ವಚನ ಕಾರ್ಯಕ್ರಮವಾದರೂ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ತಪ್ಪಿಲ್ಲ ಸಂಕಟ!
ಗುರುವಾರ, 24 ಮೇ 2018 (10:12 IST)
ಬೆಂಗಳೂರು: ನಿನ್ನೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಈ ಸರ್ಕಾರ ರಚನೆಯಾಗುವ ಮೊದಲು ಎಷ್ಟೆಲ್ಲಾ ಡ್ರಾಮಾ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಬಹುಮತಕ್ಕೆ ಬೇಕಾದಷ್ಟು ಶಾಸಕರ ಕೊರತೆಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಬಹುದೆಂದು ಈ ಎರಡೂ ಪಕ್ಷಗಳು ತಮ್ಮ ಶಾಸಕರನ್ನು ಹೋಟೆಲ್, ರೆಸಾರ್ಟ್ ನಲ್ಲಿ ಅಕ್ಷರಶಃ ಕೂಡಿಟ್ಟಿತ್ತು.
ನಿನ್ನೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಾವು ಉಳಿದುಕೊಂಡಿದ್ದ ರೆಸಾರ್ಟ್ ನಿಂದಲೇ ಬಂದಿದ್ದ ಶಾಸಕರು ಮತ್ತೆ ಮನೆಗೆ ಮರಳದೇ ರೆಸಾರ್ಟ್ ಗೇ ತೆರಳಿದ್ದರು. ಕಾಂಗ್ರೆಸ್ ಶಾಸಕರು ನಗರದ ಹಿಲ್ಟನ್ ಹೋಟೆಲ್ ನಲ್ಲಿದ್ದರೆ, ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿ ಖಾಸಗಿ ರೆಸಾರ್ಟ್ ನಲ್ಲಿದ್ದಾರೆ.
ನಾಳೆ ವಿಧಾನಸಭೆಯಲ್ಲಿ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತ ಯಾಚನೆ ನಡೆಯಲಿದ್ದು, ಇದಾದ ಬಳಿಕವಷ್ಟೇ ಈ ಶಾಸಕರಿಗೆ ಮನೆಗೆ ಹೋಗುವ ಸೌಭಾಗ್ಯ ಸಿಗಲಿದೆ. ಅಲ್ಲಿಯವರೆಗೆ ಇವರೆಲ್ಲಾ ಬಂಧನದಲ್ಲೇ ಇರಬೇಕಾಗುತ್ತದೆ. ಶಾಸಕರು ಸೂಚಿಸಿದ ಕೆಲವು ಕುಟುಂಬಸ್ಥರಿಗೆ ಮಾತ್ರ ಅವರ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅದರ ಹೊರತಾಗಿ ಹೊರ ಸಂಪರ್ಕಕ್ಕೆ ಸಿಗದಂತೆ ಶಾಸಕರನ್ನು ಇರಿಸಲಾಗಿದೆ. ಅಂತೂ ವಿಶ್ವಾಸಮತ ಯಾಚನೆ ಆಗುವವರೆಗೂ ಈ ಶಾಸಕರಿಗೆ ಬಂಧ ಮುಕ್ತವಾಗುವ ಭಾಗ್ಯವಿಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.