ಹೊಸದಿಲ್ಲಿ : ದೆಹಲಿಯಲ್ಲಿ ಕೊರೊನಾ ಒಂದೇ ದಿನ ಕೋವಿಡ್ ಸೋಂಕಿತರ ಸಂಖ್ಯೆ 41.5% ಹೆಚ್ಚಳವಾಗಿದ್ದು, ಒಟ್ಟು 15,097 ಮಂದಿಗೆ ಸೋಂಕು ತಟ್ಟಿದೆ.
ಆ ಮೂಲಕ ದೇಶದಲ್ಲಿ ಕೋವಿಡ್ನ ಮೂರನೇ ಅಲೆ ಅಪ್ಪಳಿಸಿರುವುದು ಖಚಿತಗೊಂಡಿದೆ. 2021ರ ಮೇ 8 ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು ಇದೇ ಮೊದಲು. ಕಳೆದ 24 ಗಂಟೆಯಲ್ಲಿ ಶೇ. 15 ರಷ್ಟು ಪಾಸಿಟಿವಿಟಿ ದರ ದಾಖಲಾಗಿದ್ದು, ದೆಹಲಿಯಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನುವುದರ ಸಂಕೇತ ಇದು.
ಇದೇ ವೇಳೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಜನವರಿ 1 ರಂದು 247 ಮಂದಿ ಆಸ್ಪತ್ರೆಗೆ ದಾಖಲಾದರೇ, ಜನವರಿ 4 ರಂದಯ 531 ಮಂದಿ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
'ಸದ್ಯ 1000 ದಲ್ಲಿ ಓರ್ವ ಸಾವಿಗೀಡಾಗುತ್ತಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಈ ಬಾರಿ ಪರಿಸ್ಥಿತಿ ಚೆನ್ನಾಗಿದೆ. ಹಾಸಿಗೆಗಳ ಲಭ್ಯತೆ, ಇನ್ನಿತರ ಸೌಲಭ್ಯಗಳು ಸಜ್ಜಾಗಿದ್ದು, ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಬುಧವಾರ 9000 ಬೆಡ್ ಇದ್ದು, ಇಂದು 12,000 ಬೆಡ್ಗಳು ಸಜ್ಜಾಗಿವೆ. ದೈನಂದಿನ 90,000 ಪರೀಕ್ಷೆಗಳು ನಡೆಯುತ್ತಿವೆ' ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.