ಕಾಫಿನಾಡಲ್ಲಿ ಕೊರೊನಾ ಸ್ಪೋಟ!

ಮಂಗಳವಾರ, 11 ಜನವರಿ 2022 (06:43 IST)
ಚಿಕ್ಕಮಗಳೂರು : ಜಿಲ್ಲೆಯ ಎರಡು ವಸತಿ ಶಾಲೆಯ ಸುಮಾರು 55 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ನಗರದ ಕಲ್ಯಾಣ ನಗರದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ 17 ಮಕ್ಕಳು ಹಾಗೂ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 38 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಆದರೆ ಮಕ್ಕಳಿಗೆ ಸೋಂಕು ಹರಡಲು ಕಾರಣವೇನು ಎಂದು ಜಿಲ್ಲಾಡಳಿತ ಗೊಂದಲಕ್ಕೊಳಗಾಗಿದೆ. ಇದು 1 ರಿಂದ 7ನೇ ತರಗತಿವರೆಗಿನ ವಸತಿ ಶಾಲೆಯಾಗಿದ್ದು, ವಿಸ್ತಾರವಾದ ಆವರಣವಿದೆ. ಮಕ್ಕಳ ಆಟ-ಪಾಠ ಎಲ್ಲಾ ಒಂದೇ ಕಾಂಪೌಂಡ್ ಒಳಗೆ ನಡೆಯುತ್ತದೆ.

ಮಕ್ಕಳು ಹೊರಗೇ ಬಿಡುವುದಿಲ್ಲ. ಆದರೂ ಶಾಲೆ ಒಳಗೆ ಹೆಮ್ಮಾರಿ ಕೊರೊನಾ ಹೇಗೆ ಬಂದಿದೆ ಎನ್ನುವುದು ನಿಗೂಢವಾಗಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.

ಸದ್ಯಕ್ಕೆ ಶಾಲೆಯನ್ನೇ ಸೀಲ್ಡೌನ್ಗೊಳಿಸಿರುವ ಜಿಲ್ಲಾಡಳಿತ ಪ್ರತ್ಯೇಕ ಐಸೋಲೇಶನ್ ಮೂಲಕ ಮಕ್ಕಳಿಗೆ ಚಿಕಿತ್ಸೆ ಮಂದುವರೆಸಿದ್ದು, ಇಬ್ಬರು ನರ್ಸ್ ಹಾಗೂ ಓರ್ವ ವೈದ್ಯರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಶಾಲೆಗೆ ಭೇಟಿ ನೀಡಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ ಮಕ್ಕಳ ಯೋಗಕ್ಷೇಮ ವಿಚಾರಿಸಿ ಪೋಷಕರು ಹಾಗೂ ಮಕ್ಕಳಿಗೆ ನಿಮ್ಮ ಜವಾಬ್ದಾರಿ ನಮ್ಮದ್ದು. ಯಾರೂ ಆತಂಕಕ್ಕೊಳಗಾಗಬೇಡಿ ಎಂದು ಧೈರ್ಯ ತುಂಬಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ