ಹೊಸ ದಿಲ್ಲಿ: ದೇಶಾದ್ಯಂತ ಮಿತಿ ಮೀರಿದ ವಾಯು ಮಾಲಿನ್ಯದಿಂದಾಗಿ ಮುಂದಿನ ದಿನಗಳಲ್ಲಿ ಕೋವಿಡ್ - 19 ಸೋಂಕಿತರ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಚಳಿಗಾಲ, ವಿಷಗಾಳಿ ಮತ್ತು ಕೊರೊನಾ ಬಾಧೆಗಳಿಂದ ದೇಶಾದ್ಯಂತ ಶ್ವಾಸಕೋಶ ಸಂಬಂಧಿತ ತೀವ್ರತರ ಸಮಸ್ಯೆಗಳು, ಅಸ್ತಮಾ ಬಾಧಿತರ ಉಸಿರಾಟಕ್ಕೆ ತೊಂದರೆಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ಆತಂಕವನ್ನು ಏಮ್ಸ್ ನಿರ್ದೇಶಕ ಡಾ. ರಣ ದೀಪ್ ಗುಲೇರಿಯಾ ಅವರು ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಹಲವು ಜನರಲ್ಲಿ ಅಲರ್ಜಿಯ ಕೆಮ್ಮು, ಅಸ್ತಮಾ, ಸಿಒಪಿಡಿ ಮತ್ತು ಇತರ ಶ್ವಾಸಕೋಶ ಸಂಬಂಧಿತ ಅನಾರೋಗ್ಯಗಳು ಸುಪ್ತವಾಗಿ ಇರುತ್ತವೆ. ಹೊರಗಿನ ವಾತಾವರಣದ ಪ್ರೇರಣೆ ಮೇಲೆ ಸಮಸ್ಯೆಗಳು ಉಲ್ಬಣಗೊಂಡು ಜನರನ್ನು ಬಾಧಿಸಲು ಶುರು ಮಾಡುತ್ತವೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ನೆಬುಲೈಜರ್ ಅಥವಾ ಇನ್ಹೇಲರ್ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ರೀತಿ ದುರ್ಬಲ ಶ್ವಾಸಕೋಶ ಹೊಂದಿರುವವರಿಗೆ ಕೊರೊನಾ ಸೋಂಕು ತಗುಲಿದಲ್ಲಿ ಮಾರಣಾಂತಿಕ ಆಗುವ ಅಪಾಯ ಹೆಚ್ಚಿದೆ' ಎಂದು ಗುಲೇರಿಯಾ ತಿಳಿಸಿದ್ದಾರೆ.