ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಶುಕ್ರವಾರ ಮಧ್ಯಾಹ್ನ 2:35ಕ್ಕೆ ಗಗನನೌಕೆ ನಭಕ್ಕೆ ಚಿಮ್ಮಲಿದೆ.
ಚಂದ್ರಯಾನ-3 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲಾಗುವುದು. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಗಗನನೌಕೆಯನ್ನು ಇಳಿಸಲಾಗುವುದು.
4 ಕಿಮೀ ಉದ್ದ, 2 ಕಿಮೀ ಅಗಲದ ಪ್ರದೇಶದಲ್ಲಿ ಇಳಿಯುತ್ತೆ ನೌಕೆ
ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಚಂದ್ರಯಾನ-1 ಮತ್ತು 2ರಲ್ಲಿ ಇದ್ದಂತೆ ಚಂದ್ರಯಾನ-3ರಲ್ಲಿ ಆರ್ಬಿಟರ್ ಇರುವುದಿಲ್ಲ. ಲ್ಯಾಂಡರ್ ಮತ್ತು ರೋವರ್ ಹೊತ್ತ ಗಗನನೌಕೆಯು ಆಗಸ್ಟ್ 23 ರ ಸುಮಾರಿಗೆ ಚಂದ್ರನ ಕಕ್ಷೆಗೆ ತಲುಪಲಿದೆ. ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಕಾರ್ಯನಿರ್ವಹಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ನೌಕೆ ಚಂದ್ರನಲ್ಲಿ ಇಳಿದಾಗ ಲ್ಯಾಂಡರ್ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ,
ಡೇಟಾವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು.