ಬೂಸ್ಟರ್ ಡೋಸ್ ಬಗ್ಗೆ ನಿರ್ಲಕ್ಷ್ಯ ಬೇಡ

ಗುರುವಾರ, 28 ಏಪ್ರಿಲ್ 2022 (08:29 IST)
18 ರಿಂದ 59 ವರ್ಷ ವಯೋಮಾನದವರು ಬೂಸ್ಟರ್ ಡೋಸ್ ಕೊರೋನಾ ಲಸಿಕೆ ಪಡೆಯಲು ನೀರಸ ಪ್ರತಿಕ್ರಿಯೆ ತೋರುತ್ತಿರಲು ಮುಖ್ಯ ಕಾರಣ 2ನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ಲಸಿಕೆ ನಡುವೆ 9 ತಿಂಗಳ ಅಂತರವಿರುವುದು ಕಾರಣ.

ಇದಲ್ಲದೆ ಕೋವಿಡ್ ಹೋಗಿದೆ ಎಂಬ ಉದಾಸೀನವೂ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬೂಸ್ಟರ್ ಡೋಸ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದೂ ಎಚ್ಚರಿಸಿದ್ದಾರೆ.

ಎರಡು ಡೋಸ್ ಲಸಿಕೆ ಪಡೆದ ನಾಲ್ಕೈದು ತಿಂಗಳ ಬಳಿಕ ಪ್ರತಿಕಾಯ ಶಕ್ತಿ ಕುಗ್ಗಲು ಆರಂಭವಾಗುತ್ತದೆ. 9 ತಿಂಗಳ ವೇಳೆಗೆ ಅದು ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಿರುತ್ತದೆ. ಹೀಗಾಗಿ ಎರಡನೇ ಡೋಸ್ ಲಸಿಕೆ ಪಡೆದ 6 ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಹಾಗೆಯೇ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮುನ್ನೆಚ್ಚರಿಕಾ ಲಸಿಕೆ ಬಗ್ಗೆ ಅರಿವಿನ ಕೊರತೆ ಇದೆ ಎಂದು ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ.ಇದೇ ವೇಳೆ ಕೊರೋನಾ ಅಂತ್ಯವಾಗಿಲ್ಲ. ಯಾವುದೇ ಸಮಯದಲ್ಲಿ ಹೊಸ ರೂಪಾಂತರಿ ತಳಿಗಳ ಉಗಮವಾಗಬಹುದು. ಹಾಗಾಗಿ ಮುನ್ನೆಚ್ಚರಿಕಾ ಲಸಿಕೆ ಪಡೆಯಲು ಯಾರು ಅರ್ಹರೋ ಅಂಥವರು ಅಲಕ್ಷ್ಯಿಸದೇ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.

ಹಿಂದಿನಂತೆ ಜನರು ಈಗ ಸಾಂಕ್ರಾಮಿಕಕ್ಕೆ ಹೆದರುತ್ತಿಲ್ಲ. ಕೊರೋನಾ ಪ್ರಕರಣಗಳು ತಗ್ಗುತ್ತಿರುವುದರಿಂದ ಕೋವಿಡ್ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಮನೋಭಾವ ಮೂಡಿದೆ. ಆದರೆ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ನಿರ್ಲಕ್ಷ್ಯ ಬೇಡ. ನಿರ್ದಿಷ್ಟ ಸಮಯದ ಬಳಿಕ ಜನರಲ್ಲಿ ಅದರಲ್ಲೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿರುವವರಲ್ಲಿ ಪ್ರತಿಕಾಯ ಶಕ್ತಿ ಕುಗ್ಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಎಚ್ಚರಿಸಿದ್ದಾರೆ.

18-59 ವರ್ಷ ವಯೋಮಾನದವರಿಗೆ ಬುಧವಾರ ದೇಶಾದ್ಯಂತ 16,352 ಡೋಸ್ ಲಸಿಕೆ ವಿತರಿಸಲಾಗಿದ್ದು, ಈವರೆಗೆ ಒಟ್ಟಾರೆ 62,683 ಮುನ್ನೆಚ್ಚರಿಕಾ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.

ಇತ್ತ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಗಳು ಎಲ್ಲಾ ಭಾರತೀಯ ವಯಸ್ಕರಿಗೆ ಲಭ್ಯವಾಗುವ ಒಂದು ದಿನದ ಮೊದಲು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್  ಮತ್ತು ಕೋವಾಕ್ಸಿನ್  ಬೆಲೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. ಎರಡೂ ಲಸಿಕೆ ಡೋಸ್ಗಳ ಬೆಲೆ ಈಗ ರೂ. 225 ಆಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ