ಯಾದಗಿರಿ: ಬೇಸಿಗೆ ಮುಗಿದು, ಮಳೆಗಾಲ ಆರಂಭವಾಗಿದ್ರೂ ಬಿಸಿಲೂರು ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೀರಿನ ಹಾಹಾಕಾರ ಶುರುವಾಗಿರೋದ್ರ ನಡುವೆಯೇ ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ತಾಲೂಕು ಕೇಂದ್ರದ ಜನ ಕಿಲೋಮೀಟರ್ ಗಟ್ಟಲೇ ನಡೆದು ನೀರು ತರಬೇಕಾದ ದುಸ್ಥಿತಿ ಎದುರಾಗಿದೆ.ಹೌದು. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರವಾಗಿ 10 ವರ್ಷಗಳು ಕಳೆದಿದ್ರೂ ಇದುವರೆಗೂ ನೀರಿನ ಸಮಸ್ಯೆ ಮಾತ್ರ ಸರಿ ಹೋಗಿಲ್ಲ.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ್ ಮಿಷನ್ ಈಗಾಗಲೇ ಜಿಲ್ಲೆಯಲ್ಲಿ ಮುಕ್ತಾಯದ ಹಂತ ತಲುಪಿದ್ರೂ ವಡಗೇರಾ ಜನರಿಗೆ ಮಾತ್ರ ಒಂದು ಹನಿ ನೀರು ಸಿಕ್ಕಿಲ್ಲ. ಇನ್ನೂ ಇದೇ ವಡಗೇರಾ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲೂ ನೀರು ಪೂರೈಕೆಗೆ ಯೋಜನೆ ಆರಂಭಗೊಂಡಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಶಾಲೆಗೆ ಹೋಗಬೇಕಾದ ಮಕ್ಕಳು ನಿತ್ಯವೂ, ಶಾಲೆ ಬಿಟ್ಟು ನೀರು ತರುವುದಕ್ಕೆ ಹೋಗುವಂತಾಗಿದೆ. ಗ್ರಾಮದಿಂದಾಚೆ ಎರಡು ಕಿಲೋ ಮೀಟರ್ ದೂರದಲ್ಲಿರುವ ಬೋರ್ ವೆಲ್ಗೆ ಪೋಷಕರೊಟ್ಟಿಗೆ ಹೋಗಿ ಬೈಕ್, ಸೈಕಲ್ ಹಾಗೂ ತಳ್ಳೋ ಬಂಡಿಯಲ್ಲಿ ನೀರು ತರಬೇಕು.