ಕರ್ನಾಟಕ ಬಾಕಿ ಉಳಿಸಿಕೊಂಡಿರುವ 28.8 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಸೂಚಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತಾಗಿ ಪತ್ರ ಬರೆದಿರುವ ಅವರು ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಬಿಳಿಗುಂಡ್ಲು ಬಳಿ ಉಭಯ ರಾಜ್ಯಗಳು ಹಂಚಿಕೊಳ್ಳಬೇಕಾದ ನೀರಿನ ಪ್ರಮಾಣವನ್ನು ಸುಪ್ರೀಂಕೋರ್ಟ್ ನಿರ್ಧರಿಸಿದೆ. ದುರಾದೃಷ್ಟವಶಾತ್ ಈ ತೀರ್ಪನ್ನು ಕರ್ನಾಟಕ ಸರ್ಕಾರ ಮಾನ್ಯ ಮಾಡುತ್ತಿಲ್ಲ. 2023-24ನೇ ಸಾಲಿನಲ್ಲಿ ಕರ್ನಾಟಕ 11.6 TMC ನೀರನ್ನು ಮಾತ್ರ ಬಿಡುಗಡೆ ಮಾಡಿದೆ. ಕರ್ನಾಟಕ ಒಟ್ಟು 40.4 TMC ನೀರು ಬಿಡುಗಡೆ ಮಾಡಬೇಕಿತ್ತು. ಹಾಗಾಗಿ ಉಳಿದ 28.8 TMC ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಮೋದಿ ಅವರು ಸೂಚಿಸಬೇಕು. ಕರ್ನಾಟಕ ತನ್ನ 4 ಅಣೆಕಟ್ಟುಗಳಲ್ಲಿ 91 TMC ನೀರನ್ನು ಹೊಂದಿದೆ. ಆದರೆ ಮೆಟ್ಟೂರು ಅಣೆಕಟ್ಟೆಯಲ್ಲಿ ಕೇವಲ 26.6 ಟಿಎಂಸಿ ನೀರು ಇದೆ. ಕುಡಿಯುವ ನೀರು ಹಾಗೂ ಇನ್ನಿತರ ಅವಶ್ಯಕತೆಗಳಿಗೆ ಹೋಲಿಸಿದರೆ ಇಲ್ಲಿ ಸಾಕಾಗುವಷ್ಟಿಲ್ಲ ಎಂದಿದ್ದಾರೆ. ಈಗಾಗಲೇ ಈ ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ಅವರಿಗೆ ನಾವು ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ಈಗಾಗಲೇ ಅಕ್ಕಿಯ ರಫ್ತು ನಿಷೇಧ ಮಾಡಿದೆ. ಅದೇ ರೀತಿ ಕಾವೇರಿ ಸೀಮೆಯಲ್ಲಿ ಬೆಳೆಯುವ ಭತ್ತವನ್ನು ರಕ್ಷಣೆ ಮಾಡಲು ನೀರು ಬಿಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.