ಮಂಡ್ಯ : ಕೆಆರ್ಎಸ್ ಡ್ಯಾಂನಿಂದ ನಿರಂತರವಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುನ್ನು ಖಂಡಿಸಿ ಇಂದು ರೈತ ಸಂಘ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ ಭರ್ತಿಯಾಗಿಲ್ಲ. ಈ ನಡುವೆ ತಮಿಳುನಾಡಿಗೆ ಕೆಆರ್ಎಸ್ನಿಂದ ನೀರು ಬಿಡಲಾಗುತ್ತಿದೆ.
ಇದನ್ನು ಖಂಡಿಸಿ ಸೋಮವಾರ ರಾಜ್ಯ ಬಿಜೆಪಿ ನಾಯಕರು ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಇಂದು ರೈತ ಸಂಘಟನೆಗಳು ಕೂಡ ಪ್ರತಿಭಟನೆ ನಡೆಸಲು ಮುಂದಾಗಿವೆ.
ಇಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಂಘಟನೆ ಮಂಡ್ಯದ ಇಂಡುವಾಳು ಸಮೀಪದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಎತ್ತಿನಗಾಡಿ, ಜಾನುವಾರು, ಟ್ರಾಕ್ಟರ್ ತಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದೆ.