ಮರುವಿವಾಹ ಆಗದಿದ್ದಲ್ಲಿ ಜೀವನಾಂಶ ಪಡೆಯಲು ಅರ್ಹಳು : ಕೋರ್ಟ್

ಮಂಗಳವಾರ, 19 ಏಪ್ರಿಲ್ 2022 (14:43 IST)
ಲಕ್ನೋ : ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹ ಆಗದೇ ಇದ್ದಲ್ಲಿ, ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
 
ವಿಚ್ಛೇದಿತ ಮುಸ್ಲಿಂ ಮಹಿಳೆಯು ‘ಇದ್ದತ್’ (40 ದಿನ) ಅವಧಿ ಮುಗಿದ ನಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸುವುದಾದರೆ,

ಆಕೆ ಮರುಮದುವೆಯಾಗದೇ ಇರುವವರೆಗೆ ಕ್ರಿಮಿನಲ್ ಪ್ರೊಸಿಜರ್ ಕೋಡ್ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳಾಗಿದ್ದಾಳೆ ಎಂದು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ ತಿಳಿಸಿದೆ. 

ಸಿಆರ್ಪಿಸಿಯ ಸೆಕ್ಷನ್ 125 ರ ನಿಬಂಧನೆಯು ಪ್ರಯೋಜನಕಾರಿ ಶಾಸನವಾಗಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೂ ಅದರ ಪ್ರಯೋಜನ ತಲುಪಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. 

ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಕೆ.ಎಸ್.ಪವಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ವಿಚಾರಣಾ ನ್ಯಾಯಾಲಯದ ಮುಂದೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದ ಮುಸ್ಲಿಂ ಮಹಿಳೆಗೆ ಜೀವನಾಂಶ ಮೊತ್ತ ಪಾವತಿಯಾಗಬೇಕು ಎಂದು ಪೀಠವು ನಿರ್ದೇಶಿಸಿದೆ.

ಮುಸ್ಲಿಂ ಮಹಿಳೆಯೊಬ್ಬರು ತನಗೆ ಮತ್ತು ತನ್ನ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯವು ಜನವರಿ 23, 2007 ರಂದು, ಆದೇಶ ನೀಡಿದ ದಿನಾಂಕದಿಂದ ಅವರಿಗೆ ಜೀವನಾಂಶ ನೀಡುವಂತೆ ಸೂಚಿಸಿತ್ತು.

ನಂತರ ಆಕೆಯ ಪತಿಯು ವಿಚಾರಣಾ ನ್ಯಾಯಾಲಯ ತೀರ್ಪು ಪ್ರಶ್ನಿಸಿ ಪ್ರತಾಪಗಢದ ಅಡಿಷನಲ್ ಸೆಷನ್ ಜಡ್ಜ್ಗೆ ಮನವಿ ಸಲ್ಲಿಸಿದರು.

ಪತಿ ಹಾಗೂ ಪತ್ನಿ ಇಬ್ಬರೂ ಮುಸ್ಲಿಂ ಸಮುದಾಯದವರಾಗಿರುವುದರಿಂದ ಪ್ರಕರಣವು 1986ರ ಮುಸ್ಲಿಂ ಮಹಿಳೆ ರಕ್ಷಣೆ ಕಾಯ್ದೆಯಡಿ ಬರುತ್ತದೆ. ಹೀಗಾಗಿ ಸಿಆರ್ಪಿಸಿ ಸೆಕ್ಷನ್ 125ರಡಿ ಆಕೆ ಜೀವನಾಂಶ ಪಡೆಯಲು ಅರ್ಹರಲ್ಲ ಎಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಡಿಷನಲ್ ಸೆಷನ್ ಜಡ್ಜ್ ರದ್ದುಗೊಳಿಸಿದರು.

ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿಯಿತು. ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಲು ಅರ್ಹಳು ಎಂದು ತಿಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ