ತಿರುವನಂತಪುರಂ : ಕೇರಳದ ಕೊಟ್ಟಾಯಂ ಜಿಲ್ಲೆಯ 3 ಪಂಚಾಯಿತಿಗಳಲ್ಲಿ ಏಕಾಏಕಿ ಹಕ್ಕಿ ಜ್ವರ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 6,000ಕ್ಕೂ ಅಧಿಕ ಪಕ್ಷಿಗಳನ್ನು ಹತ್ಯೆ ಮಾಡಲಾಗಿದೆ.
ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಭೀತಿ ಆವರಿಸಿದ್ದು, ಈ ಮಧ್ಯೆ ದೇಶದಲ್ಲಿ ಹಕ್ಕಿ ಜ್ವರ ಸದ್ದು ಮಾಡುತ್ತಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ವೇಚೂರು, ನಿಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ 6,017 ಪಕ್ಷಿಗಳನ್ನು ಸಂಹರಿಸಲಾಗಿದೆ. ಅದರಲ್ಲೂ ಹೆಚ್ಚಾಗಿ ಬಾತುಕೋಳಿಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೇರಳದ ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನಿಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.