ನವದೆಹಲಿ : ಸೆಪ್ಟೆಂಬರ್ 9 ಮತ್ತು 10 ರಂದು ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಾರತ ಮಂಟಪದಲ್ಲಿ 18ನೇ ಜಿ20 ಶೃಂಗಸಭೆ ನಡೆಯಲಿದೆ. 25 ಕ್ಕೂ ಹೆಚ್ಚು ರಾಜ್ಯ ಮತ್ತು ಜಾಗತಿಕ ಸಂಸ್ಥೆಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗಿಯಾಗುತ್ತಿದ್ದು, ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ.
ಗಣ್ಯರ ಭದ್ರತಾ ದೃಷ್ಟಿಯಿಂದ ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಕೆಲವು ಮೆಟ್ರೋ ನಿಲ್ದಾಣಗಳನ್ನು ಎರಡು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಿದ್ದಾರೆ. ಪೊಲೀಸರು ಹೊರಡಿಸಿರುವ ಆದೇಶದ ಪ್ರಕಾರ, ಮೋತಿ ಬಾಗ್, ಭಿಕಾಜಿ ಕಾಮಾ ಪ್ಲೇಸ್, ಮುನಿರ್ಕಾ, ಆರ್ಕೆ ಪುರಂ, ಐಐಟಿ ಮತ್ತು ಸದರ್ ಬಜಾರ್ ಕಂಟೇನ್ಮೆಂಟ್ ಮೆಟ್ರೋ ನಿಲ್ದಾಣಗಳಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ಈ ಮೆಟ್ರೋ ನಿಲ್ದಾಣಗಳಿಗೆ ಪ್ರವೇಶಿಸಲು ಅಥವಾ ಹೊರಬರಲು ಸಾಧ್ಯವಿಲ್ಲ.
ಧೌಲಾ ಕುವಾ, ಖಾನ್ ಮಾರ್ಕೆಟ್, ಜನಪಥ್, ಸುಪ್ರೀಂ ಕೋರ್ಟ್ ಮತ್ತು ಭಿಕಾಜಿ ಕಾಮಾ ಪ್ಲೇಸ್ ಮೆಟ್ರೋ ನಿಲ್ದಾಣಗಳನ್ನು ಸೂಕ್ಷ್ಮ ಸ್ಥಳಗಳ ಪಟ್ಟಿಯಲ್ಲಿ ಪೊಲೀಸರು ಇರಿಸಿದ್ದಾರೆ. ಇದರೊಂದಿಗೆ ಸುಪ್ರಿಂಕೋರ್ಟ್ ಮೆಟ್ರೋ ಸ್ಟೇಷನ್ ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ. ನಿಗದಿತ ಗೇಟ್ಗಳನ್ನು ಹೊರತುಪಡಿಸಿ, ದೆಹಲಿ ಮೆಟ್ರೋ ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
ಸೆ.7ರ ರಾತ್ರಿಯಿಂದ ಸೆ.11ರ ಸಂಜೆವರೆಗೆ ದೆಹಲಿ ವಿಮಾನ ನಿಲ್ದಾಣದ ಕಡೆಗೆ ಹೋಗುವ ಪ್ರಯಾಣಿಕರು ಮೆಟ್ರೊ ಬಳಸುವಂತೆ ಸೂಚಿಸಲಾಗಿದೆ. ಕಾಶ್ಮೀರ್ ಗೇಟ್, ಚಾಂದಿನಿ ಚೌಕ್, ಚಾವ್ರಿ ಬಜಾರ್, ನವದೆಹಲಿ, ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಉದ್ಯೋಗ್ ಭವನ, ಲೋಕ ಕಲ್ಯಾಣ ಮಾರ್ಗ ಮತ್ತು ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣ ಸೇರಿ 36 ನಿಲ್ದಾಣಗಳಲ್ಲಿ ಟೂರಿಸ್ಟ್ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ.