ಬೆಂಗಳೂರು : ಇಂದಿನಿಂದ 3 ದಿನಗಳ ಕಾಲ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಅಕ್ಟೋಬರ್ 25 ಅಥವಾ 26ಕ್ಕೆ ರಾಜ್ಯಕ್ಕೆ ಹಿಂಗಾರು ಪ್ರವೇಶವಾಗಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮಳೆಯ ಆರ್ಭಟ ಶುರುವಾಗಲಿದೆ.
ನಿನ್ನೆ ರಾತ್ರಿಯೂ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಅ. 23ರವರೆಗೆ ಕರ್ನಾಟಕದಲ್ಲಿ ಮಳೆಯಾಗಲಿದೆ. ಕರ್ನಾಟಕದ 16 ಜಿಲ್ಲೆಗಳಲ್ಲಿ ಇನ್ನು 3 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ.
ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲೇ ಮುಂಗಾರು ಮುಕ್ತಾಯವಾಗಿದೆ. ಆದರೆ, ಚಂಡಮಾರುತ ಮತ್ತು ವಾಯುಭಾರ ಕುಸಿತದಿಂದಾಗಿ ಮಳೆ ಮುಂದುವರೆದಿತ್ತು. ಇಂದಿನಿಂದಲೇ ಕರ್ನಾಟಕಕ್ಕೆ ಹಿಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಹವಾಮಾನ ತಜ್ಞರ ಪ್ರಕಾರ ಅ. 25 ಅಥವಾ 26ರಂದು ಹಿಂಗಾರು ಮಳೆ ಶುರುವಾಗಲಿದೆ. ಇಂದಿನಿಂದ ಅ. 23ರವರೆಗೆ ರಾಜ್ಯದಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.