ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್

ಶುಕ್ರವಾರ, 17 ಸೆಪ್ಟಂಬರ್ 2021 (07:54 IST)
ಬೆಂಗಳೂರು(ಸೆ.17) : ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು,  ಸೆಪ್ಟೆಂಬರ್ ತಿಂಗಳ ಆರಂಭದಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ , ಹಾಸನ ಭಾಗಗಳಲ್ಲೂ ಅಧಿಕ ಮಳೆಯಾಗಲಿದೆ. ಇನ್ನು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಸೆ.18 ಮತ್ತು 19ರಂದು ಸಹ ಮಳೆ ಮುಂದುವರೆಯಲಿದೆ. ಶನಿವಾರ ಹಾಗೂ ಭಾನುವಾರ ರಾಜ್ಯದಲ್ಲಿ ವರುಣನ ಅಬ್ಬರ ಹೆಚ್ಚಾಗಲಿದೆ. ಕರಾವಳಿ, ಮಲೆನಾಡು, ಉತ್ತರ ಮತ್ತು ನೈರುತ್ಯ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಇಂದು ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಚಂಡಮಾರುತ ಸೃಷ್ಟಿಯಾಗಲಿದ್ದು, ಇದರ ಪ್ರಭಾವದಿಂದಾಗಿ ಶನಿವಾರ ಮತ್ತು ಭಾನುವಾರ(ಸೆ.18 ಮತ್ತು 19ರಂದು) ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಇಂದಿನಿಂದ ಮೂರು ದಿನ ಮಳೆಯ ಪ್ರಮಾಣ ಹೆಚ್ಚಾಗಲಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಮುಂಗಾರಿನ ಕೊನೆಯ ತಿಂಗಳಾದ ಸೆಪ್ಟೆಂಬರ್ನಲ್ಲಿ ಹೆಚ್ಚಿನ ಮಳೆ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ