ಹಿಜಾಬ್ ನಿಷೇಧ : ಸಮವಸ್ತ್ರ ಕಡ್ಡಾಯ ಶಾಲೆಗಳಲ್ಲಿ ಅಂತಿಮ ತೀರ್ಪು
ಮಂಗಳವಾರ, 15 ಮಾರ್ಚ್ 2022 (11:21 IST)
ಬೆಂಗಳೂರು : ಹಿಜಾಬ್ ಧರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶ ಕಾನೂನುಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಮಂಗಳವಾರ ಹಿಜಾಬ್ ವಿವಾದದ ಕುರಿತಾದ ತೀರ್ಪು ಪ್ರಕಟಿಸುವ ಕಲಾಪ ಆರಂಭಿಸಿದ ಎಂಟೇ ನಿಮಿಷದಲ್ಲಿ ತೀರ್ಪು ಪ್ರಕಟಿಸಿರುವುದು ವಿಶೇಷ.
ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು, ಇಡೀ ವಿಷಯವನ್ನು ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸಿ ಕೆಲವು ಪ್ರಶ್ನೆಗಳನ್ನು ರಚಿಸಿದ್ದೇವೆ ಹಾಗೂ ಅದಕ್ಕೆ ಉತ್ತರಗಳನ್ನು ಉಲ್ಲೇಖಿಸಿದ್ದೇವೆ ಎಂದು ಸಿಜೆ ಹೇಳಿದರು.
ಪ್ರಶ್ನೆಗಳು
1. ಹಿಜಾಬ್ ಧರಿಸುವುದು ಇಸ್ಲಾಂ ಅಡಿಯಲ್ಲಿ ಅವಶ್ಯಕ ಧಾರ್ಮಿಕ ಆಚರಣೆಯೇ?
2. ಶಾಲಾ ಸಮವಸ್ತ್ರಗಳನ್ನು ಕಡ್ಡಾಯಗೊಳಿಸುವುದು ಹಕ್ಕುಗಳ ಉಲ್ಲಂಘನೆಯೇ?
3. ಫೆ. 5ರಂದು ರಾಜ್ಯ ಸರ್ಕಾರ ನೀಡಿದ ಆದೇಶವು ಅನರ್ಹವಾಗಿದೆಯೇ ಮತ್ತು ಅದು ಸಂವಿಧಾನದ 14 ಹಾಗೂ 15ನೇ ವಿಧಿಯನ್ನು ಕಡೆಗಣಿಸುತ್ತದೆಯೇ?
4. ಉಡುಪಿ ಕಾಲೇಜಿನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೇ?
ಉತ್ತರಗಳು
1. ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ
2. ಸಮವಸ್ತ್ರ ನಿಗದಿ ಸರಿಯಾದ ಕ್ರಮ, ಇದರಿಂದ ಮೂಲಭೂತ ಹಕ್ಕುಗಳಿಗೆ ಧಕ್ಕೆಯಿಲ್ಲ
3. ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ
4. ಸಮವಸ್ತ್ರ ನಿಗದಿಪಡಿಸುವ ಹಕ್ಕು ಶಾಲೆ ಕಾಲೇಜುಗಳಿಗೆ ಇದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ತೀರ್ಪು ನೀಡಿದೆ.
ಈ ವಿವಾದವು ಮೊದಲು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಬಳಿಕ ಅವರು ಅದನ್ನು ಪೂರ್ಣಪೀಠಕ್ಕೆ ವರ್ಗಾಯಿಸಿದ್ದರು. 11 ದಿನ ವಿಚಾರಣೆ ನಡೆಸಿದ ಪೂರ್ಣ ಪೀಠ, ಫೆ. 25ರಂದು ತೀರ್ಪು ಕಾಯ್ದಿರಿಸಿತ್ತು.
ಸಮವಸ್ತ್ರ ಕಡ್ಡಾಯ ಮಾಡಿರುವ ಶಾಲೆಗಳಲ್ಲಿ ಅಂತಿಮ ತೀರ್ಪು ಪ್ರಕಟವಾಗಿರುವವರೆಗೂ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಅಥವಾ ಇತರೆ ಯಾವುದೇ ಧಾರ್ಮಿಕ ಗುರುತನ್ನು ಧರಿಸುವಂತಿಲ್ಲ ಎಂದು ಮಧ್ಯಂತರ ತೀರ್ಪು ನೀಡಿತ್ತು.