ಶಾಲಾ-ಕಾಲೇಜುಗಳಿಗೆ ರಜೆ

ಮಂಗಳವಾರ, 5 ಜುಲೈ 2022 (07:04 IST)
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿ-ಹಳ್ಳ-ಕೊಳ್ಳ-ತೊರೆಗಳು ಮೈದುಂಬಿ ಹರಿಯುತ್ತಿವೆ.
 
 ಈ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮಲೆನಾಡು ಭಾಗದ 3 ತಾಲೂಕಿಗೆ ರಜೆ ಘೋಷಿಸಿದೆ. ಜಿಲ್ಲೆಯ ಕಳಸ ಹಾಗೂ ಶೃಂಗೇರಿ ತಾಲೂಕಿನ ಎಲ್ಲಾ ಶಾಲೆಗಳು ಹಾಗೂ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ರಜೆ ನೀಡಲು ಆದೇಶಿಸಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದ ಕಳಸ ತಾಲೂಕಿನ ಕುದುರೆಮುಖದ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.

ಭದ್ರೆಯ ಅಬ್ಬರ ಜೋರಿರುವ ಕಾರಣ ಕಳಸ-ಹೊರನಾಡು ಸಂಪರ್ಕ ಸೇತುವೆ ಹೆಬ್ಬಾಳೆ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 1 ಗಂಟೆಗೂ ಅಧಿಕ ಕಾಲ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ವಾಹನಗಳು ನಿಂತಲ್ಲೇ ನಿಂತು ಪರದಾಡಬೇಕಾಯ್ತು.

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತುಂಗಾ ನದಿ ಕೂಡ ಮೈದುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತುಂಗಾ ನದಿಯ ಅಬ್ಬರ ಜೋರಾಗಿದ್ದು ತುಂಗೆಯ ನೀರು ಶೃಂಗೇರಿ ದೇವಸ್ಥಾನದ ವಾಹನಗಳ ಪಾರ್ಕಿಂಗ್ ಜಾಗ ಪ್ರವೇಶಿಸಿತ್ತು. ಪಾರ್ಕಿಂಗ್ ಜಾಗಕ್ಕೆ ಹೋಗುವ ಮಾರ್ಗ ಕೂಡ ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿತ್ತು. 

ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನಲ್ಲೂ ಮಳೆ ಅಬ್ಬರ ಮುಂದುವರೆದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ