ಮಾಸ್ಕೋ : ಸ್ಪುಟ್ನಿಕ್-ವಿ ಲಸಿಕೆ ಕೋವಿಡ್-19 ರೂಪಾಂತರ ಓಮಿಕ್ರಾನ್ ಸೋಂಕಿನ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಎಂದು ರಷ್ಯಾ ತಿಳಿಸಿದೆ.
ರಷ್ಯಾದ ಆರೋಗ್ಯ ಸಚಿವಾಲಯದ ಭಾಗವಾಗಿರುವ ಗಮಲೇಂಯ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಸ್ಪುಟ್ನಿಕ್-ವಿ ಓಮಿಕ್ರಾನ್ ವಿರುದ್ಧ ಹೋರಾಡುವಲ್ಲಿ ಹೆಚ್ಚಿನ ಪರಿಣಾಮ ತೋರುತ್ತಿರುವುದು ಕಂಡು ಬಂದಿದೆ.
ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಸ್ಪುಟ್ನಿಕ್-ವಿ ಲಸಿಕೆ ಇತರ ಲಸಿಕೆಗಳಿಗಿಂತಲೂ ರೋಗಿಗಳಲ್ಲಿ ಮೂರರಿಂದ ಏಳು ಪಟ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಹಾಗೆಯೇ ಶೇ.80 ರಷ್ಟು ಪರಿಣಾಮಕಾರಿ ಫಲಿತಾಂಶವನ್ನು ತೋರಿದೆ ಎಂದು ತಿಳಿದು ಬರುತ್ತದೆ.
ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಆಗಿ ಪಡೆಯುವುದು ಕೂಡಾ ಹೆಚ್ಚು ಪರಿಣಾಮಕಾರಿ ಎಂಬ ಇನ್ನೊಂದು ಮಾಹಿತಿ ನೀಡಿದೆ. ಈ ಲಸಿಕೆಯನ್ನು ಪಡೆದುಕೊಂಡ 2-3 ತಿಂಗಳ ಬಳಿಕ ಓಮಿಕ್ರಾನ್ ವೈರಸ್ ವಿರುದ್ಧ ಅತೀ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದೆ.
ರಷ್ಯಾ ರಕ್ಷಣಾ ಸಚಿವಾಲಯ ಮತ್ತು ಮಾಸ್ಕೋದ ಗಮಲೇಂಯ ಸಂಶೋಧನಾ ಸಂಸ್ಥೆ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಈ ಲಸಿಕೆಯನ್ನು ಕಳೆದ ವರ್ಷ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುತ್ರಿಗೆ ನೀಡಲಾಗಿತ್ತು.