ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನನಗೆ ಗುಲಗಂಜಿಯಷ್ಟು ಅಪನಂಬಿಕೆ ಇಲ್ಲ- ಎಸ್.ಎಂ.ಕೃಷ್ಣ

ಮಂಗಳವಾರ, 10 ಏಪ್ರಿಲ್ 2018 (16:19 IST)
ಬೆಂಗಳೂರು : ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲವೆಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಮರಳಿ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿರುವ ಹಿನ್ನಲೆಯಲ್ಲಿ ಇದೀಗ ಸ್ವತಃ ಎಸ್.ಎಂ.ಕೃಷ್ಣ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ ಈ ವದಂತಿಗೆ ತೆರೆ ಎಳೆದಿದ್ದಾರೆ.

ಪ್ರಸ್ತುತ ಮುಂಬೈ ನಲ್ಲಿರುವ ಎಸ್.ಎಂ.ಕೃಷ್ಣ ಅವರು ದೂರವಾಣಿ ಮೂಲಕ ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ  ಮಾತನಾಡಿ,’ ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಹಾಗಾಗಿ ನಾನು ಕಾಂಗ್ರೆಸ್ ಸೇರಲು ಮುಂದಾಗಿದ್ದೇನೆ. ಇದಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದು ಗಾಳಿ ಸುದ್ದಿ.ಇದಕ್ಕೆಲ್ಲ ಯಾರೂ ಕಿವಿಗೊಡಬಾರದು’ ಎಂದು ಮನವಿ ಮಾಡಿದ್ದಾರೆ.

 

‘ಎಂತಹ ಸಂದರ್ಭದಲ್ಲೂ ಬಿಜೆಪಿ ಬಿಟ್ಟು ನಾನು ಕಾಂಗ್ರೆಸ್‍ಗೆ ಹೋಗುವುದಿಲ್ಲ. ನನ್ನ ಆರೋಗ್ಯ ಸಹಕರಿಸಿದರೆ ಈ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ. ಬಿಜೆಪಿಯಲ್ಲಿ ಎಲ್ಲ ಸರಿ ಇರುವಾಗ ಬೇರೆ ಪಕ್ಷವನ್ನು ಏಕೆ ಸೇರಬೇಕು. ನನ್ನ ಕುಟುಂಬದ ಯಾವುದೇ ಸದಸ್ಯರಿಗೆ ಟಿಕೆಟ್ ನೀಡಬೇಕೆಂದು ನಾನಾಗಲಿ ಅಥವಾ ಬೇರೆ ಯಾರೂ ಕೂಡ ಲಾಬಿ ನಡೆಸಿಲ್ಲ. ಅವರವರ ಸಾಮಥ್ರ್ಯಕ್ಕೆ ಅನುಗುಣವಾಗಿ ಪಕ್ಷದ ಮುಖಂಡರು ಟಿಕೆಟ್ ನೀಡುತ್ತಾರೆ. ನಮ್ಮ ಪುತ್ರಿ ಅಥವಾ ಬೇರೆ ಯಾರೇ ರಾಜಕೀಯಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಷಯ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಕೆಲವು ಆಗದವರು ಆಗಾಗ್ಗೆ ಇಂತಹ ವದಂತಿಗಳನ್ನು ಹಬ್ಬಿಸುತ್ತಾರೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನನಗೆ ಗುಲಗಂಜಿಯಷ್ಟು ಅಪನಂಬಿಕೆ ಇಲ್ಲ’ ಎಂದು ಎಸ್.ಎಂ.ಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ