ಮಂತ್ರಿಪಟ್ಟಕ್ಕೆ ತಡೆಯಾಜ್ಞೆಯೇ ಕಂಟಕ?

ಶನಿವಾರ, 31 ಜುಲೈ 2021 (08:19 IST)
ಬೆಂಗಳೂರು (ಜು. 31) : ತಮಗಿರುವ ಎಲ್ಲ ಶಕ್ತಿ ಸಾಮರ್ಥ್ಯ ಬಳಸಿ ಮಂತ್ರಿ ಸ್ಥಾನ ಗಿಟ್ಟಿಸಲು ಅನೇಕ ಶಾಸಕರು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲ ಶಾಸಕರಿಗೆ ತಡೆಯಾಜ್ಞೆ ಭಯ ಕಾಡುತ್ತಿದೆ.

ಮಾನಹಾನಿ ಆಗುವಂತ ಸುದ್ದಿ ಪ್ರಕಟಿಸಬಾರದು ಎಂದು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದ ಶಾಸಕರಿಗೆ ಇದೀಗ ಸಂಪುಟ ಸೇರಲು ಅದೇ ಕಂಟಕವಾಗಿ ಪರಿಣಮಿಸಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ಹಲವು ಶಾಸಕರು ತಡೆಯಾಜ್ಞೆ ತಂದಿದ್ದರು. ಬಾಂಬೆ ಮಿತ್ರ ಮಂಡಳಿಯ ಬಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್, ಡಾ.ಕೆ.ಸುಧಾಕರ್, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಹಾಗೂ ನಾರಾಯಣಗೌಡ ಸ್ಟೇ ಆದೇ ತಂದಿದ್ದರು. ವಲಸಿಗರು ಮಾತ್ರವಲ್ಲ ಬಿಜೆಪಿಯ ಮುರುಗೇಶ್ ನಿರಾಣಿ, ಎಂ.ಪಿ.ರೇಣುಕಾಚಾರ್ಯ ಕೂಡ ತಡೆಯಾಜ್ಞೆ ತಂದಿದ್ದಾರೆ.
ಕಳಂಕಿತರಿಗೆ ಸಚಿವ ಸ್ಥಾನ ಬೇಡವೆಂದ ಆರ್ಎಸ್ಎಸ್...!
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸೇರಲು ನಾ ಮುಂದು, ತಾ ಮುಂದು ಎಂದು ಕೆಲ ಬಹಿರಂಗ ಹಾಗೂ ತೆರೆ ಮರೆ ಪ್ರಯತ್ನ ಮಾಡುತ್ತಿರುವಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಗೆ ಸಂದೇಶ ರವಾನಿಸಿದೆ. ಕಳಂಕಿತರಿಗೆ ಅದರಲ್ಲೂ ತಡೆಯಾಜ್ಞೆ ತಂದ ಶಾಸಕರಿಗೆ ಆರ್ಎಸ್ಎಸ್ ಸಂದೇಶ ಆಘಾತ ತಂದಿದೆ. ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗದ ನಂತರ ರಾಜ್ಯ ಮಾತ್ರವಲ್ಲ ದೇಶದಲ್ಲೇ ಮುಜುಗರ ಅನುಭವಿಸಿದಂತಾಗಿತ್ತು. ಮುಂದೆ ವಿಷಮ ರಾಜಕೀಯ ಸನ್ನಿವೇಶದಲ್ಲಿ ಅಂತಹದ್ದೇ ಪ್ರಕರಣ ಮರುಕಳಿಸಿದರೆ ಪಕ್ಷಕ್ಕೆ ಬಹುದೊಡ್ಡ ಹಾನಿ ಆಗುವುದು ನಿಶ್ಚಿತ. ಇಂತಹ ಅನಿರೀಕ್ಷಿತ ಘಟನೆ ಮರುಕಳಿಸಿದ್ದೇ ಆದರೆ ಖಂಡಿತವಾಗಿ ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕಳಂಕಿತರು ಅಥವಾ ತಡೆಯಾಜ್ಞೆ ತಂದಿರುವ ಶಾಸಕರನ್ನು ದೂರ ಇರಿಸಿ ಎಂದು ಸಂದೇಶ ನೀಡಿದೆ.
ಪ್ರತಿಕ್ರಿಯೆಗೆ ಶಿವರಾಮ ಹೆಬ್ಬಾರ್ ನಕಾರ:
ತಡೆಯಾಜ್ಞೆ ತಂದವರಿಗೆ ಸಚಿವ ಸ್ಥಾನ ಇಲ್ಲ ಎಂಬ ಆರ್ಎಸ್ಎಸ್ ಸಂದೇಶದ ಕುರಿತು ಪ್ರತಿಕ್ರಿಯೆ ನೀಡಲು ಶಿವರಾಮ ಹೆಬ್ಬಾರ್ ನಕಾರ ವ್ಯಕ್ತಪಡಿಸಿದರು. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಇನ್ನೆರಡು ದಿನ ಕಾಯ್ದರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಜಾರಿಕೊಳ್ಳುವ ಯತ್ನ ಮಾಡಿದರು.

ನುಣುಚಿಕೊಂಡ ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ:ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ವಿರುದ್ಧ ಯಾವುದೇ ಮಾನಹಾನಿಯಾಗುವ ಸುದ್ದಿ ಬಿತ್ತರಿಸಬಾರದು ಎಂದು  ಇಂದು ಕೋರ್ಟ್ ತಡೆಯಾಜ್ಞೆ ತಂದಿದ್ದಾರೆ. ಆರ್ಎಸ್ಎಸ್ ನೀಡಿದ ಸಂದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟದಲ್ಲಿ ಸೇರ್ಪಡೆ ಮಾಡುವ ಪರಮಾಧಿಕಾರಿ ಸಿಎಂ ಅವರಿಗೆ ಬಿಟ್ಟದ್ದು, ಸಿಎಂ ಅವರೇ ತೀರ್ಮಾನ ಮಾಡುತ್ತಾರೆ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಮುಖಾಂತರ ಯಾವುದೇ ಲಾಬಿ ಮಾಡಿಲ್ಲ. ನಾನು  ಹಿಂದೆಯೂ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ದಾವಣಗೆರೆ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ಭರವಸೆ ಇದೆ ಎಂದು ರೇಣುಕಾಚಾರ್ಯ ಹೇಳುತ್ತಲೇ, ಕೋರ್ಟ್ ತಡೆಯಾಜ್ಞೆ ತಂದಿರುವ ಬಗ್ಗೆ ಹಾರಿಕೆ ಉತ್ತರ ನೀಡಿ ನುಣುಚಿಕೊಂಡರು.

ಅಂದು ಆತ್ಮಗೌರವ ರಕ್ಷಣೆ, ಇಂದು ಸಚಿವ ಸ್ಥಾನಕ್ಕೆ ಕಂಟಕ:
ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದ ಶಾಸಕರು, ನಮ್ಮ ಆತ್ಮಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ತಡೆಯಾಜ್ಞೆ ತಂದಿದ್ದೇವೆ ಎಂದು ಹೇಳಿದ್ದ ಅಷ್ಟೂ ಶಾಸಕರಿಗೆ ಇದೀಗ ಅದೇ ಸಚಿವ ಸ್ಥಾನಕ್ಕೆ ಮುಳ್ಳಾಗಿ ಪರಿಣಮಿಸಿದೆ. ಆದರೆ ಇದೊಂದು ಕಾರಣಕ್ಕೆ ತಡೆಯಾಜ್ಞೆ ತಂದವರನ್ನು ದೂರ ಇಟ್ಟರೆ ಭಿನ್ನಮತ ಸ್ಪೋಟವಾಗುವ ಆತಂಕ ಸಿಎಂ ಮುಂದಿದೆ. ಹೀಗಾಗಿ ಆರ್ಎಸ್ಎಸ್ ನೀಡಿದ ಸಂದೇಶವನ್ನು ಯತಾವತ್ತಾಗಿ ಪಾಲಿಸುತ್ತಾರಾ ಅಥವಾ ಅದರ ಹೊರತಾಗಿಯೂ ನಿರ್ಧಾರ ತೆಗೆದುಕೊಳ್ಳುತ್ತಾರಾ ಗೊತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ