ಬೆಂಗಳೂರು : ಇಂದು ದಿ. ಡಾ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಜೊತೆಗೆ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ.
ಹೀಗಾಗಿ ಇಮದು ಅಪ್ಪು ಅಭಿಮಾನಿಗಳು ಹಬ್ಬವನ್ನೇ ಆಚರಿಸುತ್ತಿದ್ದಾರೆ. ಈ ನಡುವೆ ಶೀಘ್ರವೇ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಈಗಾಗಲೇ ತೀರ್ಮಾನ ಆಗಿದೆ. ಪ್ರಶಸ್ತಿ ಪ್ರದಾನ ಮಾಡುವ ಸಂಬಂಧ ಡಾ.ರಾಜ್ ಕುಟುಂಬದ ಜತೆ ಚರ್ಚೆ ನಡೆಸುತ್ತೇನೆ.
ಈ ಸಂಬಂಧ ಒಂದು ಸಮಿತಿ ಕೂಡ ರಚಿಸಲಾಗುವುದು. ಪ್ರಶಸ್ತಿ ಪ್ರದಾನ ಮಾಡುವ ದಿನಾಂಕ ನಿಗದಿ ಬಗ್ಗೆಯೂ ಆದಷ್ಟು ಬೇಗ ನಿರ್ಧಾರ ಮಾಡಲಾಗುವುದು ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಯಾವ ರೀತಿ ಮಾಡಬೇಕೆಂಬ ಬಗ್ಗೆ ಕುಟುಂಬದ ಜೊತೆ ಚರ್ಚಿಸಲಾಗುವುದು. ಡಾ.ರಾಜ್ ಹಾಗೂ ಪುನೀತ್ ರಿಗೆ ಗೌರವ ಬರುವ ಹಾಗೆ ಕಾರ್ಯಕ್ರಮ ನಡೆಸಲಾಗುವುದು. ಒಟ್ಟಿನಲ್ಲಿ ಆದಷ್ಟು ಬೇಗ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಮಾಡುವುದಾಗಿ ಸಿಎಂ ತಿಳಿಸಿದರು.