ನವದೆಹಲಿ : ಇಲ್ಲಿಯವರೆಗೆ ಕೇಳರಿಯದ ಭಾರೀ ದೊಡ್ಡ ಮಟ್ಟದ ಡೇಟಾ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ.
ವಿಶ್ವದಾದ್ಯಂತ ಸುಮಾರು 50 ಕೋಟಿ ವಾಟ್ಸಪ್ ಬಳಕೆದಾರರ ಡೇಟಾ ಸೋರಿಕೆಯಾಗಿದ್ದು, ಅದನ್ನು ಮಾರಾಟಕ್ಕಿಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸೈಬರ್ ನ್ಯೂಸ್ ವರದಿ ತಿಳಿಸಿದೆ.
ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸಪ್ ಬಳಕೆದಾರರ ದೂರವಾಣಿ ಸಂಖ್ಯೆಯನ್ನು ಮಾರಾಟಕ್ಕೆ ಇಟ್ಟಿದೆ. ಇದರಲ್ಲಿ 84 ದೇಶಗಳ ವಾಟ್ಸಪ್ ಬಳಕೆದಾರರ ಖಾಸಗಿ ಮಾಹಿತಿ ಒಳಗೊಂಡಿದೆ. ಈಜಿಪ್ಟ್, ಇಟಲಿ, ಫ್ರಾನ್ಸ್, ಬ್ರಿಟನ್, ರಷ್ಯಾ ಹಾಗೂ ಭಾರತವೂ ಸೇರಿದಂತೆ ಲಕ್ಷಾಂತರ ಬಳಕೆದಾರರ ಸಂಖ್ಯೆಗಳು ಇದರಲ್ಲಿ ಸೇರಿವೆ ಎನ್ನಲಾಗಿದೆ.
ವರದಿಗಳ ಪ್ರಕಾರ, 84 ದೇಶಗಳ ಪೈಕಿ ಈಜಿಪ್ಟ್ನ ಅತಿ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, 4.5 ಕೋಟಿ ಜನರ ಮಾಹಿತಿ ಇದರಲ್ಲಿ ಸೇರಿವೆ.
ಇಟಲಿಯ 3.5 ಕೋಟಿ ಹಾಗೂ ಅಮೆರಿಕದ 3.2 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ. ಭಾರತದ 60 ಲಕ್ಷ ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದೆ ಎಂಬುದನ್ನು ವರದಿ ತಿಳಿಸಿದೆ.