ಬಿಎಸ್ ಪಿ ನಾಯಕಿ ಮಾಯಾವತಿ ಮುಂದಿನ ಪ್ರಧಾನಿ ಅಭ್ಯರ್ಥಿ! ಕಾಂಗ್ರೆಸ್ ಜತೆಗೂ ಚರ್ಚೆ!
ಭಾನುವಾರ, 27 ಮೇ 2018 (09:42 IST)
ನವದೆಹಲಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ದೇಶದ ರಾಜಕೀಯಕ್ಕೆ ಹೊಸದೊಂದು ದಿಕ್ಸೂಚಿ ನೀಡಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಸ್ಪೂರ್ತಿಗೊಂಡಿರುವ ಬಿಜೆಪಿ ವಿರೋಧಿ ಪಕ್ಷಗಳು ಇದೀಗ ಲೋಕಸಭೆ ಚುನಾವಣೆಗೂ ಇದೇ ತಂತ್ರ ಎದುರಿಸುವ ಯೋಜನೆ ನಡೆಸಿದೆ.
ತನ್ನ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಂಡು ಬಿಎಸ್ ಪಿ ನಾಯಕಿ ಮಾಯಾವತಿ ಕಾಂಗ್ರೆಸ್ ಜತೆಗೆ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳಲು ಚಿಂತನೆ ನಡೆಸಿದೆ.
ಅಷ್ಟಕ್ಕೂ ಮಾಯಾವತಿಗೆ ಪ್ರಧಾನಿಯಾಗುವ ಕನಸು ಹಿಂದಿನಿಂದಲೂ ಇತ್ತು. ಏಕಾಂಗಿಯಾಗಿ ತಮ್ಮದೇ ಪಕ್ಷ ಬಹುಮತ ಸಿಕ್ಕಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎನ್ನುವುದು ಮಾಯಾವತಿಗೂ ಗೊತ್ತು. ಅದಕ್ಕಾಗಿಯೇ ಅವರು ಹಿಂದಿನಿಂದಲೂ ತೃತೀಯ ರಂಗದ ಕಡೆಗೆ ಒಲವು ಹೊಂದಿದ್ದರು.
ಆದರೆ ಇದುವರೆಗೆ ಅವರ ಕನಸಿಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅಡ್ಡಿಯಾಗುತ್ತಿದ್ದರು. ಒಂದು ಕಾಲದಲ್ಲಿ ಅವರೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದವರೇ. ಆದರೆ ಅದು ಈಡೇರಲಿಲ್ಲ.
ಆದರೆ ಇದೀಗ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಅವರೊಳಗೇ ಕೆಲವರಲ್ಲಿ ಅಸಮಾಧಾನವಿದೆ. ಇತ್ತ ಪ್ರಧಾನಿ ಮೋದಿ ವಿರುದ್ಧ ತೃತೀಯ ರಂಗವೊಂದರ ರಚನೆ ಅನಿವಾರ್ಯ ಎಂಬ ಸತ್ಯ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಮನವರಿಕೆಯಾಗಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲ ಪಡೆದರೆ ಆ ತೃತೀಯ ರಂಗದ ಚುಕ್ಕಾಣಿ ತಾನೇ ಹಿಡಿಯಬಹುದು ಎಂಬ ಲೆಕ್ಕಾಚಾರ ಮಾಯಾವತಿಗಿರಬಹುದು. ಒಂದು ವೇಳೆ ಹೀಗಾದರೆ ಸಮ್ಮಿಶ್ರ ಸರ್ಕಾರದ ಸೂತ್ರದಲ್ಲಿ ರಾಹುಲ್ ಗಾಂಧಿಯವರನ್ನೇ ಪ್ರಧಾನಿ ಪಟ್ಟದಿಂದ ದೂರವಿಟ್ಟರೂ ಅಚ್ಚರಿಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.