ಶ್ರೀನಗರ : 32 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಉದ್ಘಾಟನೆಗೊಂಡಿದ್ದು, ಇದೇ ಸೆಪ್ಟೆಂಬರ್ 20 ರಿಂದ ಆಮೀರ್ ಖಾನ್ ನಟನೆಯ ಲಾಲ್ಸಿಂಗ್ ಚಡ್ಡಾ ಸಿನಿಮಾದೊಂದಿಗೆ ಪ್ರದರ್ಶನ ಆರಂಭವಾಗಲಿದೆ.
ಜಮ್ಮು ಮತ್ತು ಕಾಶ್ಮೀರದ ಸರ್ಕಾರದ ಯುವ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾಡಳಿದ ಸಹಯೋಗದೊಂದಿಗೆ ಚಿತ್ರಮಂದಿರಗಳನ್ನು ಸ್ಥಾಪನೆ ಮಾಡುವ ವಿವಿಧೊದ್ದೇಶ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದರ ಭಾಗವಾಗಿ ಇದೇ ಸೆಪ್ಟೆಂಬರ್ 20ರಿಂದಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿ ಪ್ರದರ್ಶನ ಆರಂಭಿಸಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಂದು ದಕ್ಷಿಣ ಕಾಶ್ಮೀರದ ಅವಳಿ ಜಿಲ್ಲೆಗಳಾದ ಪುಲ್ವಾಮಾ ಮತ್ತು ಶೋಪಿಯಾನ್ನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಉದ್ಘಾಟಿಸಿದರು.
ಅಲ್ಲದೇ ಇಲ್ಲಿನ ಅನಂತನಾಗ್, ಶ್ರೀನಗರ, ಬಂಡಿಪೋರಾ, ಗಂದರ್ಬಾಲ್, ದೋಡಾ, ರಾಜೌರಿ, ಪೂಂಚ್, ಕಿಶ್ತ್ವಾರ್ ಮತ್ತು ರಿಯಾಸಿ ಜಿಲ್ಲೆಗಳಲ್ಲೂ ಚಿತ್ರಮಂದಿರಗಳು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.