ಕಣ್ಣೀರು ಹಾಕಿಸಲಿದೆ ಈರುಳ್ಳಿ!

ಮಂಗಳವಾರ, 23 ನವೆಂಬರ್ 2021 (10:17 IST)
ದಾವಣಗೆರೆ : ಒಂದೆಡೆ ಮುಂಗಾರು ಹಂಗಾಮಿನ ಬೆಳೆ ಕಟಾವು ಮುಗಿದಿದೆ. ಇನ್ನೊಂದೆಡೆ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಈರುಳ್ಳಿ ಅತಿಯಾದ ಮಳೆಯಿಂದ ಕೊಳೆಯುತ್ತಿದೆ.
ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ 34,000 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಗೀಡಾಗಿದೆ. ಹೀಗಾಗಿ, ಬೆಳೆಗಾರರು ತೀವ್ರ ನಷ್ಟ ಅನುಭವಿಸುವ ಜತೆಗೆ ಈರುಳ್ಳಿ ಬೆಲೆ ಗಗನಕ್ಕೇರಲಿದ್ದು, ರೈತ-ಗ್ರಾಹಕ ಇಬ್ಬರ ಕಣ್ಣುಗಳಲ್ಲಿ ನೀರು ತರಿಸಲಿದೆ.
ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಸೇರಿ ರಾಜ್ಯದ ಪ್ರಮುಖ ಈರುಳ್ಳಿ ಮಾರುಕಟ್ಟೆಗಳಲ್ಲಿ ಅವಕ ಕುಸಿದಿದೆ. ರಾಜ್ಯದ ರೈತರು ಮುಂಗಾರು ಬೆಳೆಯನ್ನು ಸಂಪೂರ್ಣ ಕಟಾವು ಮಾಡಿ ಮಾರಾಟ ಮಾಡಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಈರುಳ್ಳಿ ಇಲ್ಲಿನ ಮಾರುಕಟ್ಟೆಗಳಿಗೆ ದಾಂಗುಡಿ ಇಟ್ಟಿದೆ. ರಾಜ್ಯದ ರೈತರಿಂದ ಮಂಡಿಗಳಿಗೆ ಬರುವ ಉಳ್ಳಾಗಡ್ಡಿ ಅವಕ ನಿಂತು ವಾರ ಕಳೆದಿದೆ. ಅತ್ತ ತಮಿಳುನಾಡಿನಲ್ಲೂ ಮಳೆ ಹೆಚ್ಚಾಗಿರುವ ಕಾರಣ ಅಲ್ಲಿಂದಲೂ ಬರುತ್ತಿಲ್ಲ. ಹೀಗಾಗಿ ಮಹಾರಾಷ್ಟ್ರದಿಂದ ಈರುಳ್ಳಿ ತರಿಸಿಕೊಳ್ಳುತ್ತಿದ್ದೇವೆ ಎಂದು ದಾವಣಗೆರೆಯ ಈರುಳ್ಳಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಎನ್.ಕೆ. ಬಸವಲಿಂಗಪ್ಪ ಮಾಹಿತಿ ನೀಡಿದ್ದಾರೆ.
ಸೆಂಚೂರಿ ಬಾರಿಸಲಿದೆ ಬೆಲೆ?
'ಈಗಿನ ಪರಿಸ್ಥಿತಿ ಗಮನಿಸಿದರೆ ಮುಂಬರುವ ಒಂದು ಅಥವಾ ಎರಡು ತಿಂಗಳಲ್ಲಿ ಈರುಳ್ಳಿ ಬೆಲೆ 100 ರೂ. ತಲುಪುವ ಸಾಧ್ಯತೆ ಇದೆ. ಈ ಬಾರಿ ಎರಡೂ ಹಂಗಾಮಿನ ಬೆಳೆ ಮಳೆಗೆ ಸಿಲುಕಿ ಹಾಳಾಗಿದೆ. ಬೆಂಗಳೂರು, ದಾವಣಗೆರೆ ಮಾರುಕಟ್ಟೆಗಳಿಗೆ ತಮಿಳುನಾಡಿನಿಂದ ಹೆಚ್ಚು ಈರುಳ್ಳಿ ಬರುತ್ತಿತ್ತು. ಆದರೆ, ಈ ಬಾರಿ ಅಲ್ಲೂ ಮಳೆ ಹೆಚ್ಚಾಗಿದ್ದು, ಅಲ್ಲಿಂದ ಈರುಳ್ಳಿ ಬಂದು ಹಲವು ದಿನ ಕಳೆದಿವೆ.
.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ