ಬೆಂಗಳೂರು : ರಾಜ್ಯದಲ್ಲಿ 12ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್-19ರಿಂದ ರಕ್ಷಣೆ ನೀಡಲು ಆರಂಭಿಸಿರುವ ಲಸಿಕಾ ಅಭಿಯಾನಕ್ಕೆ ಇನ್ನೂ ನಿರೀಕ್ಷಿತ ವೇಗ ದೊರೆತಿಲ್ಲ.
ಮಾ.16ರಿಂದ ಅಭಿಯಾನ ಆರಂಭಗೊಂಡಿದ್ದರೂ ರಾಜ್ಯದಲ್ಲಿನ 20 ಲಕ್ಷ ಮಕ್ಕಳ ಪೈಕಿ ಈವರೆಗೆ 1.14 ಲಕ್ಷ ಮಕ್ಕಳು ಮಾತ್ರ ಲಸಿಕೆ ಪಡೆದಿದ್ದಾರೆ. ಸದ್ಯ ಶೇ.5 ರಷ್ಟುಮಾತ್ರ ಸಾಧನೆಯಾಗಿದೆ.
ಸದ್ಯ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡುತ್ತಿರುವುದು, ಪರೀಕ್ಷೆ ನಡೆಯುತ್ತಿರುವುದು, ಚಿಕ್ಕಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರು ಹಿಂಜರಿಯುತ್ತಿರುವ ಪರಿಣಾಮ ಲಸಿಕೆ ನೀಡಿಕೆ ಪ್ರಮಾಣ ಕಡಿಮೆಯಾಗಿದೆ.
ಜೊತೆಗೆ ಸದ್ಯ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸಹ ಲಸಿಕೆ ಕೊಡಿಸಲು ಉದಾಸೀನ ಮಾಡುತ್ತಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಲಸಿಕೆ ಪಡೆದ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಾವೇರಿಯಲ್ಲಿ ಕೇವಲ 23, ಬೀದರ್ನಲ್ಲಿ 24, ಶಿವಮೊಗ್ಗ 40, ಬಾಗಲಕೋಟೆ 58, ಮಂಡ್ಯ 63 ಮತ್ತು ದಾವಣಗೆರೆಯಲ್ಲಿ 88 ಮಂದಿ ಮಕ್ಕಳು ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2.81 ಲಕ್ಷ ಮಕ್ಕಳಿದ್ದರೂ ಲಸಿಕೆ ಪಡೆದಿರುವುದು 7,741 ಮಂದಿ ಮಾತ್ರ.
ಉಳಿದಂತೆ ಕೋಲಾರದಲ್ಲಿ 13,499, ಬಳ್ಳಾರಿ 10,629, ಚಾಮರಾಜ ನಗರ 10,072, ತುಮಕೂರು 9,442 ಮಕ್ಕಳು ಲಸಿಕೆ ಪಡೆದಿದ್ದಾರೆ. ಈವರೆಗೆ ಲಸಿಕೆ ಪಡೆದ ರಾಜ್ಯದ ಮಕ್ಕಳಲ್ಲಿ ಈ ಐದು ಜಿಲ್ಲೆಗಳ ಪಾಲು ಹೆಚ್ಚು ಕಡಿಮೆ ಅರ್ಧದಷ್ಟಿದೆ.