ರಾಜ್ಯದೆಲ್ಲೆಡೆ ಭರ್ಜರಿ ಮುಂಗಾರು ಪೂರ್ವ ಮಳೆ

ಭಾನುವಾರ, 8 ಮೇ 2022 (08:32 IST)
ಬೆಂಗಳೂರು : ರಾಜ್ಯದೆಲ್ಲೆಡೆ ಮುಂಗಾರು ಪೂರ್ವ ಮಳೆ ಭರ್ಜರಿಯಾಗಿ ಸುರಿದಿದೆ. ಅದರಲ್ಲೂ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ.

ಇನ್ನು 17 ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಮಳೆ ಕೊರತೆ ಉಂಟಾಗಿದೆ. ಸದ್ಯದ ಹವಾಮಾನ ಪರಿಸ್ಥಿತಿ ಗಮನಿಸಿದರೆ ಮುಂದಿನ ಒಂದು ವಾರಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.

ಭಾರತೀಯ ಹವಾಮಾನ ಕೇಂದ್ರ ನೀಡಿರುವ ಮಾಹಿತಿಯಂತೆ ಮಾಚ್ರ್ 1 ರಿಂದ ಮೇ 4ರವರೆಗೆ ದಕ್ಷಿಣ ಕನ್ನಡ (ಶೇ. 180), ಉಡುಪಿ (ಶೇ. 161), ಉತ್ತರ ಕನ್ನಡ (158), ಚಾಮರಾಜನಗರ (ಶೇ.134), ಧಾರವಾಡ (ಶೇ.133), ಶಿವಮೊಗ್ಗ (ಶೇ. 128), ದಾವಣಗೆರೆ (ಶೇ.111), ಹಾವೇರಿ (ಶೇ.107) ಬೆಂಗಳೂರು ಗ್ರಾಮಾಂತರ (ಶೇ. 102) ಜಿಲ್ಲೆಗಳಲ್ಲಿ ಕಳೆದೊಂದು ತಿಂಗಳಿನಿಂದ ಭರ್ಜರಿ ಮಳೆಯಾಗಿದೆ.

ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ ದುಪ್ಟಟ್ಟು ಮಳೆ ಬಿದ್ದಿದೆ. ಇನ್ನು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ನಗರ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ವಾಡಿಗೆಗಿಂತ ಅತ್ಯಧಿಕ ಮಳೆಯಾಗಿದೆ.

ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಸುರಿದಿದೆ. ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆಯ ಪ್ರಮಾಣದ ಮಳೆ ಬಿದ್ದಿದೆ.

ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಒಟ್ಟಾರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗಿದೆ. ವಾಡಿಕೆಯಂತೆ ರಾಜ್ಯದಲ್ಲಿ ಈ ಅವಧಿಯಲ್ಲಿ 49.9 ಮಿ.ಮೀ ಮಳೆಯಾಗುತ್ತಿದ್ದರೆ ಈ ವರ್ಷ 80.2 ಮಿ.ಮೀ ಮಳೆಯಾಗಿದೆ. ತನ್ಮೂಲಕ ವಾಡಿಕೆಗಿಂತ ಶೇ. 61ರಷ್ಟುಹೆಚ್ಚು ಮಳೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ