ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವರುಣದೇವ ಅಬ್ಬರಿಸುತ್ತಿದ್ದಾನೆ. ಕಾರವಾರದ ರೈಲ್ವೆ ನಿಲ್ದಾಣ ರಸ್ತೆ, ಹಬ್ಬುವಾಡ, ಸೋನಾರವಾಡ, ಸಾಯಿಬಾಬಾ ಮಂದಿರ ರಸ್ತೆಗಳು ಜಲಾವೃತವಾಗಿ ಜನ ಪರದಾಡಿದ್ರು.
ಮನೆಗಳಿಗೆ ನೀರು ನುಗ್ಗಿದ್ದಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಳೆಯು ಸಹ ವರುಣನ ರೌದ್ರಾವತಾರ ಮುಂದುವರಿಯಲಿದ್ದು, ಜೂನ್ 25ರ ವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಇದರೊಂದಿಗೆ ಸ್ಥಳೀಯರು, ಪ್ರವಾಸಿಗರು ನದಿ ಹಾಗೂ ಸಮುದ್ರದಲ್ಲಿ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಕೋಲಾರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಮುಂದಿನ 48 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲೂ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆಯಿದೆ.