ಶ್ರೀನಗರ : 31 ತಿಂಗಳ ಕಾಲ ಮುಚ್ಚಿದ್ದ ಜಮ್ಮು ಮತ್ತು ಕಾಶ್ಮೀರದ ಶಾಲೆಗಳು ಮತ್ತೆ ಪುನಾರಂಭವಾಗಿದೆ.
ಆಗಸ್ಟ್ 5 2019 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ಅಲ್ಲದೆ ಈ ಪ್ರದೇಶಗಳ ಇಂಟರ್ನೆಟ್ ಸೇವೆಗೂ ಸಹ ನಿರ್ಬಂಧ ಹೇರಲಾಗಿತ್ತು.
ಇದೇ ವೇಳೆ ಗಡಿ ಪ್ರದೇಶದಲ್ಲಿ ಭದ್ರತೆ ಮತ್ತು ಕೋವಿಡ್ ಹಿನ್ನೆಲೆ ಶಾಲೆಗಳನ್ನು ಮುಚ್ಚಲಾಗಿತ್ತು. ಪರಿಣಾಮ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಕೇಳಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ 31 ತಿಂಗಳ ಎಲ್ಲ ಕಷ್ಟಗಳ ನಂತರ ಮತ್ತೆ ಶಾಲೆ ಪ್ರಾರಂಭವಾಗಿದ್ದು, ಲಕ್ಷಾಂತರ ಮಕ್ಕಳು ಸಂತೋಷಗೊಂಡಿದ್ದಾರೆ.
ಶ್ರೀನಗರದ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ, 9 ನೇ ತರಗತಿಯ ವಿದ್ಯಾರ್ಥಿ ಖಾರಿಯಾ ತಮ್ಮ ಶಾಲೆ ಮತ್ತೆ ಆರಂಭವಾದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು, ಯಾವುದೇ ಸ್ನೇಹಿತರು ನನ್ನನ್ನು ಗುರುತಿಸುತ್ತಿಲ್ಲ. ನಾನು ನನ್ನ ಬಸ್ ಸಂಖ್ಯೆ, ನನ್ನ ತರಗತಿ ಯಾವುದು ಎಂಬುದನ್ನೆ ಮರೆತಿದ್ದೇನೆ. ಈಗ ನಾನು ನನಗೆ ನೆನಪಿರುವ ಯಾರನ್ನಾದರೂ ಹುಡುಕಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ಶ್ರೀನಗರದ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ 4,500 ವಿದ್ಯಾರ್ಥಿಗಳಿದ್ದು, ಅವರಿಗೆ ಭವ್ಯ ಸ್ವಾಗತವನ್ನು ಏರ್ಪಡಿಸಲಾಗಿತ್ತು. ಪುನರಾರಂಭದ ಮೊದಲ ವಾರವನ್ನು ಎಲ್ಲ ಶಾಲೆಗಳು ಸಂತೋಷದ ವಾರ ಎಂದು ಘೋಷಿಸಲಾಗಿದೆ.