ನವದೆಹಲಿ : ಎಂಜಿನಿಯರಿಂಗ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಕೋವಿಡ್ ನಿರ್ಬಂಧನೆ ನಡುವೆ ಫೆಬ್ರವರಿ 5ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಅದನ್ನೀಗ ಮುಂದೂಡದೆ ಅದೇ ದಿನ ನಡೆಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಯಾವಾಗ ಪರೀಕ್ಷೆ ನಡೆಸಬೇಕೆಂಬುದು ಶೈಕ್ಷಣಿಕ ನೀತಿಯಾಗಿದ್ದು ಅದರಂತೆ ಪರೀಕ್ಷೆ ನಡೆಸಬೇಕು, ಈ ವಿಷಯದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಕೂಡ ನ್ಯಾಯಪೀಠ ಹೇಳಿದೆ.
ಈ ಬಾರಿಯ ಗೇಟ್ ಪರೀಕ್ಷೆಯಲ್ಲಿ 9 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದು, ಸುಮಾರು 20 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಆನ್ ಲೈನ್ ನಲ್ಲಿ ಸಹಿ ಹಾಕಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಎಂಜಿನಿಯರಿಂಗ್ ಪದವಿ ತರಗತಿಗಳಲ್ಲಿನ ವಿಷಯಗಳು ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅಧ್ಯಯನ ಮಾಡಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ತರಗತಿಗಳ ಪ್ರವೇಶಕ್ಕೆ ಮತ್ತು ಕೆಲವು ಸಾರ್ವಜನಿಕ ವಲಯ ಘಟಕಗಳಲ್ಲಿ ನೇಮಕಾತಿಗೆ ಗೇಟ್ ಪರೀಕ್ಷೆ ನಡೆಸಲಾಗುತ್ತದೆ.
ಗೇಟ್ 2022 ಪರೀಕ್ಷೆಗಳು ಫೆಬ್ರವರಿ 5,2022 ರಂದು ಪ್ರಾರಂಭವಾಗಿ ಫೆಬ್ರವರಿ 13, 2022ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ವೇಳಾಪಟ್ಟಿ ಮತ್ತು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://gate.iitkgp.ac.in/ ನಲ್ಲಿ ವೀಕ್ಷಿಸಬಹುದು.