ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತ ಸ್ಮರಣೀಯ

ಮಂಗಳವಾರ, 15 ಆಗಸ್ಟ್ 2023 (09:51 IST)
ಕ್ವಿಟ್ ಇಂಡಿಯಾ ಚಳವಳಿ (1942): ಬ್ರಿಟಿಷ್ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ ಕಳುಹಿಸಿದ್ದ ಸ್ಟಾಫರ್ಡ್ ಕ್ರಿಪ್ಸ್ ಆಯೋಗವು 1942ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು.

ಈ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು, ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು, ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ ಸಲಹೆಗಳನ್ನು ನೀಡಿತು. ಈ ಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿತು. ʻಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ಬಿಟ್ಟು ತೊಲಗಿ’ ಎನ್ನುವುದು ಕ್ವಿಟ್ ಇಂಡಿಯಾ ಚಳವಳಿಯ ಆಶಯವಾಗಿತ್ತು.

ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮುದಿನಿ ನದಿಯ ದಂಡೆಯ ಮೇಲಿರುವ ಒಂದು ಚಿಕ್ಕ ಗ್ರಾಮ. ಈ ಗ್ರಾಮವು ಭಾರತದಲ್ಲೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊದಲ ಗ್ರಾಮವಾಯಿತು. ಈ ಗ್ರಾಮದ ಜನರು ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು. ಚಲೇಜಾವ್ ಚಳವಳಿಯಿಂದ ಪ್ರಭಾವಿತರಾದ ಈ ಗ್ರಾಮದ ಯುವಕರೆಲ್ಲರೂ ಗಾಂಧೀ ಟೋಪಿ ಧರಿಸಿ ರಾಷ್ಟ್ರಧ್ವಜ ಹಿಡಿದು ಸಭೆಗಳನ್ನ ನಡೆಸುತ್ತಿದ್ದರು.

1942ರ ಸೆಪ್ಟೆಂಬರ್ 25ರಂದು ಈ ಗ್ರಾಮದ ಜನರು ತಮ್ಮ ಗ್ರಾಮವು ಸ್ವತಂತ್ರವೆಂದು ಘೋಷಿಸಿ ವೀರಭದ್ರನ ದೇವಾಲಯದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಪಟೇಲ ಮತ್ತು ಶಾನುಭೋಗರ ದಫ್ತರುಗಳನ್ನು ಕಿತ್ತುಕೊಂಡು ಸುಟ್ಟು ಹಾಕಿದರು. ಈ ಘಟನೆ ಘಟಿಸಿದ 3 ದಿನಗಳ ತರುವಾಯ ಒಬ್ಬ ಅಮಲ್ದಾರ್ ಮತ್ತು ಒಬ್ಬ ಪೊಲೀಸ್ ಅಧಿಕಾರಿಗಳು ಪೊಲೀಸರೊಂದಿಗೆ ಬಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿ 3 ಜನ ಗ್ರಾಮಸ್ಥರನ್ನು ಕೊಂದು ಹಾಕಿದರು.

ಈ ಘಟನೆಯಿಂದ ಕ್ರೋಧಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದಂಗೆಯೆದ್ದರು. ಈ ಗಲಭೆಯಲ್ಲಿ ಪೊಲೀಸ್ ಅಧಿಕಾರಿಗಳೂ ಮರಣ ಹೊಂದಿದರು. ಈ ಸುದ್ದಿ ತಿಳಿದ ತಕ್ಷಣ ಸರ್ಕಾರವು ಈಸೂರು ಗ್ರಾಮಕ್ಕೆ ಸೈನ್ಯ ಮತ್ತು ಪೊಲೀಸ್ ಪಡೆಯನ್ನ ಕಳಿಸಿತು. ಈ ಸೈನ್ಯವು ಮುಗ್ಧ ಜನರ ಮೇಲೆ ಚಿತ್ರಹಿಂಸೆಯನ್ನು ಕೈಗೊಂಡಿತು. ಗುಂಡು ಹಾರಿಸಿ 41 ಜನರನ್ನು ಬಂಧಿಸಿತು. ದಂಗೆಗೆ ಕಾರಣರಾದವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿತು.

1943ರ ಜನವರಿ 9 ರಂದು ಅಂದು ರಾಜ್ಯವಾಗಿದ್ದ ಮೈಸೂರು ಉಚ್ಛ ನ್ಯಾಯಾಲಯದ ತೀರ್ಪಿನ ಪ್ರಕಾರ ಗುರಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯನಾರಾಯಣಾಚಾರ್ಯ ಮತ್ತು ಶಂಕರಪ್ಪ ಎಂಬ 5 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಸಿದ್ಧಮ್ಮ, ಹಾಲಮ್ಮ ಮತ್ತು ಪಾರ್ವತಮ್ಮ ಎಂಬ ಐದು ಜನರಿಗೆ ಜೀವಾವಧಿ ಗಡಿಪಾರು ಶಿಕ್ಷೆ ನೀಡಿತು. 1946ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತವು ಸ್ಮರಣೀಯವಾದುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ