ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ : ಸುಪ್ರೀಂ
ಮಂಗಳವಾರ, 6 ಸೆಪ್ಟಂಬರ್ 2022 (10:40 IST)
ನವದೆಹಲಿ : ಹಿಜಬ್ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣ. ಮಾತ್ರವಲ್ಲದೆ ದೇಶದಲ್ಲೂ ಈ ವಿಷಯ ಸದ್ದು ಮಾಡಿತ್ತು.
ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ನ್ಯಾ ಹೇಮಂತ್ ಗುಪ್ತಾ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ರಾಜೀವ್ ದವನ್, ಹಿಜಬ್ ನಿಷೇಧ ಮಾಡಿರುವ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಿದೆ.
ಅವರ ಶಿಕ್ಷಣದ ಹಕ್ಕು ಕಸಿದುಕೊಂಡಂತೆ ಆಗಿದೆ. ಹಿಜಬ್ ಗೆ ಸಂಬಂಧಿಸಿ ಕೇರಳ ಮತ್ತು ಕರ್ನಾಟಕ ವಿಭಿನ್ನ ತೀರ್ಪುಗಳನ್ನು ನೀಡಿವೆ, ಒಂದು ಪರವಾಗಿದ್ದರೆ ಮತ್ತೊಂದು ವಿರುದ್ಧವಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ತೆಗೆದುಕೊಳ್ಳಲಿರುವ ನಿಲುವು ಅತ್ಯಂತ ಮಹತ್ವದ್ದೆನಿಸಿಕೊಳ್ಳಲಿದೆ ಎಂದರು.
ಕಡೆಯದಾಗಿ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಪಿ. ನಾವಡಗಿ, ನಾವು ಸಮವಸ್ತ್ರ ನಿರ್ಧರಿಸುವ ಅಧಿಕಾರ ಶಾಲಾ ಆಡಳಿತ ಮಂಡಳಿಗೆ ನೀಡಿದ್ದೇವೆ, ಕೆಲವು ಶಾಲೆಗಳು ಹಿಜಬ್ ಧರಿಸಲು ಅವಕಾಶ ನೀಡಿವೆ, ನಾವು ಅದನ್ನು ವಿರೋಧಿಸುವುದಿಲ್ಲ ಎಂದರು. ವಿಚಾರಣೆ ಬಳಿಕ ಪ್ರಕರಣದ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು. ಇನ್ನು ಬುಧವಾರ ನಡೆಯಲಿರುವ ವಿಚಾರಣೆ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ.