ಅವಿವಾಹಿತ ಯುವತಿಗೆ ದೆಹಲಿ ಹೈಕೋರ್ಟ್ ಸಲಹೆ ಏನು?

ಶುಕ್ರವಾರ, 15 ಜುಲೈ 2022 (15:39 IST)
ನವದೆಹಲಿ : 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗರ್ಭಪಾತ ಮಾಡಿಸದಂತೆ ಸೂಚಿಸಿದ್ದು, ಮಗುವಿಗೆ ಜನ್ಮ ನೀಡಿ, ದತ್ತು ನೀಡುವಂತೆ ಸಲಹೆ ನೀಡಿದೆ.

ಅರ್ಜಿ ವಿಚಾರಣೆ ನಡೆದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಗರ್ಭಪಾತಕ್ಕೆ ನಿರಾಕರಿಸಿದರು. ಈ ಹಂತದಲ್ಲಿ ಗರ್ಭಪಾತ ಮಾಡುವುದು ಮಗುವನ್ನು ಹತ್ಯೆ ಮಾಡಿದಂತೆ. ಮಕ್ಕಳನ್ನು ದತ್ತು ಪಡೆಯಲು ದೊಡ್ಡ ಸರದಿಯೇ ಇದ್ದು, ಮಗುವಿಗೆ ಜನ್ಮ ನೀಡಿ ದತ್ತು ನೀಡಬಹುದಲ್ಲವೇ ಎಂದು ಕೋರ್ಟ್ ಅರ್ಜಿದಾರರಿಗೆ ಕೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಪರ ವಕೀಲರು, ವೈದ್ಯಕೀಯ ನಿಯಮಗಳ ಪ್ರಕಾರ 24 ವಾರಗಳು ಮೀರದ ಭ್ರೂಣದ ಗರ್ಭಪಾತ ಮಾಡಬಹುದು. ಯುವತಿಗೆ 23 ವಾರ 4 ದಿನಗಳು ತುಂಬಿದೆ.

ಹೀಗಾಗಿ ಗರ್ಭಪಾತಕ್ಕೆ ಅವಕಾಶಗಳಿದೆ. ಯುವತಿ ಗರ್ಭಿಣಿಯಾಗಿ ಮುಂದುವರಿಯುವುದು ಅವಳ ಜೀವಕ್ಕೆ ಅಪಾಯ ತಂದೊಡ್ಡಬಹುದು ಅಥಾವ ದೈಹಿಕವಾಗಿ, ಮಾನಸಿಕವಾಗಿ ಗಾಯಗೊಳಿಸಬಹುದು ಎಂದರು.

ಇದೇ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಮುಖ್ಯ ನ್ಯಾಯಮೂರ್ತಿ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಹಂತದಲ್ಲಿ ಮಗುವಿಗೆ ಗರ್ಭಪಾತ ಮಾಡಬಾರದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ