ಬೆಂಗಳೂರು : 2021-22ನೇ ಶೈಕ್ಷಣಿಕ ಸಾಲಿಗೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸೇವಾಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಮೂರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 14 ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈಗ ಕಾರ್ಯಭಾರ ಮತ್ತು ವೇತನ ಎರಡನ್ನೂ ಸೂಕ್ತವಾಗಿ ನಿಗದಿಪಡಿಸಿ ಇವರ ಪೈಕಿ 10,600 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಹೀಗಾಗಿ 14 ಸಾವಿರ ಮಂದಿಯ ಪೈಕಿ ಕೇವಲ 3,400 ಮಂದಿ ಮಾತ್ರ ಆಯ್ಕೆ ಆಗುವುದಿಲ್ಲ. ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು.
ಇವರಲ್ಲಿ ಇದುವರೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದರವರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅತ್ಯಂತ ಕಡಿಮೆ ಅನುಭವ ಹೊಂದಿದವರಿಗೆ ಮಾತ್ರ ನೇಮಕಾತಿ ಕೈತಪ್ಪಲಿದೆ ಎಂದು ಅವರು ವಿವರಿಸಿದರು.
ಇದುವರೆಗೂ ಅತಿಥಿ ಉಪನ್ಯಾಸಕರು ಗರಿಷ್ಠ ಅವಧಿ ಬೋಧನೆ ಮಾಡಿದರೂ ಅವರ ಮಾಸಿಕ ವೇತನ 13 ಸಾವಿರ ರು. ದಾಟುತ್ತಿರಲಿಲ್ಲ. ಆದರೆ, ಈಗ ನೇಮಕ ಆಗುತ್ತಿರುವವರಿಗೆ ಗರಿಷ್ಠ 32 ಸಾವಿರ ರು. ಗಳವರೆಗೆ ಹೆಚ್ಚಿಸಲಾಗಿದೆ.