ಹೊಸದಿಲ್ಲಿ : ದೇಶಾದ್ಯಂತ ಜನವರಿಯಿಂದ ಮಕ್ಕಳಿಗೂ ಕೊರೊನಾ ನಿರೋಧಕ ಲಸಿಕೆ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ.
''ಮಕ್ಕಳಿಗೆ ಲಸಿಕೆ ನೀಡುವ ಕುರಿತು ಎರಡು ವಾರದೊಳಗೆ ಸರಕಾರದ ಉನ್ನತ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಮಂಡಳಿ (ಎನ್ಟಿಎಜಿ) ದೇಶಾದ್ಯಂತ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಯೋಜನೆ ರೂಪಿಸಲಿದೆ,'' ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
''ದೇಶದಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖದಲ್ಲಿದ್ದರೂ ಮೂರನೇ ಅಲೆ ಭೀತಿ ಸಂಪೂರ್ಣವಾಗಿ ಮಾಸಿಲ್ಲ. ಅದರಲ್ಲೂ, ಮೂರನೇ ಅಲೆ ಅಪ್ಪಳಿಸಿದಲ್ಲಿ ಮಕ್ಕಳಿಗೆ ಹೆಚ್ಚು ಬಾಧಿಸಲಿದೆ ಎಂದು ವರದಿಗಳು ತಿಳಿಸಿವೆ. ಹಾಗಾಗಿ ಮಕ್ಕಳಿಗೆ ಲಸಿಕೆ ನೀಡುವುದು ಕೇಂದ್ರ ಸರಕಾರದ ಆದ್ಯತೆಯಾಗಿದೆ. ಈ ದಿಸೆಯಲ್ಲಿ ಲಸಿಕೆಯ ಹೆಚ್ಚುವರಿ ಡೋಸ್ಗಳ ಪೂರೈಕೆಗೂ ಸಮರ್ಪಕವಾಗಿ ಯೋಜನೆ ರೂಪಿಸಲಾಗುತ್ತಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದರೆ ಜನವರಿಯಿಂದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ,'' ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಇದುವರೆಗೆ 18 ವರ್ಷ ಮೇಲ್ಪಟ್ಟ ಶೇ.81ರಷ್ಟು ಮೊದಲ ಡೋಸ್ ಹಾಗೂ ಶೇ.43ರಷ್ಟು ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಹಾಗಾಗಿ ಸರಕಾರದ ಗಮನವೀಗ ಮಕ್ಕಳಿಗೆ ಲಸಿಕೆ ನೀಡುವುದಾಗಿದೆ. ಆದಾಗ್ಯೂ, ಎರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಮಕ್ಕಳು ಧೈರ್ಯವಾಗಿ ಶಾಲೆಗೆ ತೆರಳಲು ಅವರಿಗೆ ಲಸಿಕೆ ನೀಡುವುದು ಅವಶ್ಯ ಎನ್ನುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ. ಬೂಸ್ಟರ್ ಡೋಸ್ಗೂ ಚಿಂತನೆ: ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಬೂಸ್ಟರ್ ಡೋಸ್ (ಮೂರನೇ ಡೋಸ್) ನೀಡುವ ಕುರಿತಾಗಿಯೂ ಸರಕಾರದ ಮಟ್ಟದಲ್ಲಿಗಂಭೀರ ಚಿಂತನೆ ನಡೆಯುತ್ತಿದೆ.