ಬೆಂಗಳೂರು : ಉತ್ತರದಲ್ಲಿ ಅಬ್ಬರಿಸ್ತಿರೋ ಮಳೆರಾಯ ದಕ್ಷಿಣದಲ್ಲಿ ಬರ್ಲೋ ಬೇಡ್ವೋ ಅಂತ ಸತಾಯಿಸ್ತಿದ್ದಾನೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಜಿಟಿಜಿಟಿ ಮಳೆ ದಿನವಿಡೀ ಸುರಿಯಿತು.
ರಾಜ್ಯದ ಕರಾವಳಿ-ದಕ್ಷಿಣ ಒಳನಾಡಿನಲ್ಲಿ ಜುಲೈ 16ರ ವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ಮತ್ತಷ್ಟು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಡುಪಿ ಜಿಲ್ಲೆ ಸಂತೆಕಟ್ಟೆ ಓವರ್ ಪಾಸ್ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆ ಕುಸಿದಿದೆ. ರಸ್ತೆ ನಿರ್ಮಾಣದ ವೇಳೆ ಪಾದೆ ಕಲ್ಲು ಸಿಕ್ಕ ಪರಿಣಾಮ ಕಾಮಗಾರಿ ಮೊಟಕುಗೊಂಡಿತ್ತು. ಐದು ದಿನದಿಂದ ಸುರಿದ ಮಳೆಗೆ ಮಣ್ಣುಮೃದುಗೊಂಡು ಕುಸಿದಿದೆ. ಮತ್ತಷ್ಟು ಮಣ್ಣು ಕುಸಿದರೆ ನೂರಾರು ಮನೆಗಳಿಗೆ ಮನೆಗಳಿಗೆ ಸಂಪರ್ಕ ಕಡಿತವಾಗುತ್ತದೆ.