ಪದ್ಮ ಎಂದರೆ ತಾವರೆ, ಕಮಲ ಎಂದರ್ಥ. ಇದು ಸಂಸ್ಕೃತ ಜನ್ಯ ನಾಮ. ಪದ್ಮ ಆಕಾರದ ಭಂಗಿಯನ್ನೇ ಪದ್ಮಾಸನ ಎನ್ನಲಾಗುತ್ತದೆ.
ವಿಧಾನ :
• ಕಾಲುಗಳನ್ನು ಉದ್ದಕ್ಕೆ ಚಾಚಿ ನೆಲದ ಮೇಲೆ ಕುಳಿತುಕೊಳ್ಳಿ.
• ಬಲ ಮೊಣಕಾಲನ್ನು ಬಾಗಿಸಿ ಮತ್ತು ಬಲ ಪಾದವನ್ನು ಎರಡೂ ಕೈಗಳಿಂದ ಹಿಡಿದು ಎಳೆಯುತ್ತಾ ಎಡ ತೊಡೆಯ ಮೇಲೆ ಇರಿಸಿ. ಬಲ ಪಾದದ ಹಿಮ್ಮಡಿ ನಾಭಿಗೆ ಆದಷ್ಟೂ ಸಮೀಪವಿರಲಿ.
• ಎಡ ಮೊಣಕಾಲನ್ನು ಬಾಗಿಸಿ ಮತ್ತು ಎಡ ಪಾದವನ್ನು ಎರಡೂ ಕೈಗಳಿಂದ ಹಿಡಿದು, ಅದನ್ನು ಬಲ ತೊಡೆಯ ಮೇಲಿರಿಸಿ. ಅದೇ ರೀತಿ ಎಡ ಪಾದದ ಹಿಮ್ಮಡಿಯು ನಾಭಿ ಭಾಗಕ್ಕೆ ಎಷ್ಟು ಸಾಧ್ಯವೇ ಅಷ್ಟು ಹತ್ತಿರ ಬರಲಿ.
WD
• ಎರಡೂ ಮೊಣಕಾಲುಗಳು ನೆಲವನ್ನು ತಾಗಿರಬೇಕು ಮತ್ತು ಎರಡೂ ಅಂಗಾಲುಗಳು ಮೇಲ್ಮುಖವಾಗಿರಬೇಕು. ಬೆನ್ನುಮೂಳೆ ಸಡಿಲವಾಗಿ ನೇರವಾಗಿರಲಿ ಆದರೆ ಬಿಗಿಗೊಳಿಸಬೇಡಿ.
• ಈ ಭಂಗಿ ಅಹಿತಕಾರಿ ಅನ್ನಿಸಿದರೆ, ನೀವು ಒಂದಿಷ್ಟು ಸಮಯದ ಬಳಿಕ ಕಾಲುಗಳ ಸ್ಥಿತಿಯನ್ನು ಬದಲಿಸಿಕೊಳ್ಳಬಹುದು.
• ಬೆನ್ನು ನೇರವಾಗಿರಲಿ. ಕೈಗಳು ನಮಸ್ತೆ ಭಂಗಿಯಲ್ಲಿರಲಿ ಅಥವಾ ಅದನ್ನು ಮೊಣಗಂಟಿನ ಮೇಲಿರಿಸಿ. ಅಥವಾ ಅಂಗೈಗಳು ಕೆಳಮುಖವಾಗಿರುವಂತೆ ಎರಡೂ ಕೈಗಳನ್ನು ಎರಡು ಮೊಣಗಂಟಿನ ಮೇಲಿರಿಸಿ. ಇಲ್ಲವೇ, ಎರಡೂ ಅಂಗೈಗಳನ್ನು ಮೇಲ್ಮುಖವಾಗಿರಿಸಿ ತೋರು ಬೆರಳಿನ ತುದಿಯಿಂದ ಹೆಬ್ಬೆರಳ ತುದಿಯನ್ನು ಮುಟ್ಟುವಂತೆ (ಜ್ಞಾನಮುದ್ರೆ) ಇರಿಸಿ. ಉಳಿದ ಬೆರಳುಗಳು ನೇರವಾಗಿರಬೇಕು.
ಪದ್ಮಾಸನದ ಲಾಭ:
• ಮೆದುಳನ್ನು ಶಾಂತಗೊಳಿಸುತ್ತದೆ. • ಇಡೀ ಶರೀರಕ್ಕೆ ವಿಶ್ರಾಂತಿ ನೀಡುತ್ತದೆ. • ಮಣಿಗಂಟುಗಳು ಮತ್ತು ಮೊಣಕಾಲುಗಳನ್ನು ಸಡಿಲಿಸುತ್ತದೆ. • ಜಠರ, ಬೆನ್ನುಮೂಳೆ, ಉದರ ಮತ್ತು ಬ್ಲಾಡರ್ ಭಾಗಗಳಿಗೆ ಚೈತನ್ಯ ನೀಡುತ್ತದೆ.