ನಾಯಿ ಕಡಿತಕ್ಕೆ ಚರಂಡಿ ಸ್ನಾನ ಮದ್ದು!

WDWD
ಆಹಾ ! ಜಗತ್ತಿನಲ್ಲಿ ಇನ್ನೂ ಎಂತೆಂತಹ ಪರಿಹಾರಗಳನ್ನು ಮನುಷ್ಯ ಶೋಧಿಸುತ್ತಾನೆ ಎಂದರೆ ಲೆಕ್ಕವಿಲ್ಲ. ಅದ್ಕೆ ಮನುಷ್ಯ ಎನ್ನುವವನಿಗೆ ಬುದ್ಧಿ ಹೆಚ್ಚು ಎಂದು ಹೇಳುವುದು. ಅಕಸ್ಮಾತ್ ಸರಿರಾತ್ರಿಯಲ್ಲಿ ಹೋಗುವಾಗ ನಾಯಿಯೊಂದು ಕಚ್ಚಿತು ಅಂತಿಟ್ಕೊಳ್ಳಿ. ಆಗ ನೀವೇನು ಮಾಡುತ್ತಿರಿ ? ಡಾಕ್ಟರ್ ಹತ್ತಿರ ಹೋಗಿ ಇಂಜಕ್ಷನ್ ಮಾಡಿಸಿಕೊಳ್ಳುತ್ತೀರಿ. ಬಹುಶಃ ಅದು ಹುಚ್ಚು ನಾಯಿ ಆಗಿದ್ದರೆ ಹೊಕ್ಕಳ ಸುತ್ತ ಭರ್ತಿ ಹದಿನಾಲ್ಕು ಇಂಜಕ್ಷನ್ ಮಾಡಿಸ್ಕೋಬೇಕು. ಬಿಡದ ಕರ್ಮ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೆಬೇಕು.

ಇಲ್ಲಿದೆ ಪರಿಹಾರ, ಲಕ್ನೋದಲ್ಲಿ, ಅಲ್ಲಿಯ ಒಂದು ಚರಂಡಿಯಲ್ಲಿ ಸ್ನಾನ ಮಾಡಿದರೆ ಸಾವಿರ ರೂಪಾಯಿಗಳು ಉಳೀತದೆ. ಹೆಚ್ಚಾಗಿ ಹೊಕ್ಕಳ ಇಂಜಕ್ಷನ್ ನರಕದಿಂದ ನೀವು ಬೈಪಾಸ್ ಆಗಬಹುದು. ಲಕ್ನೋದಿಂದ ಫೈಜಾಬಾದ್ ಸೇತುವೆ ಕೆಳಗೆ ಇರುವ ಈ ಹಳ್ಳಕ್ಕೆ ಕುಕ್ರೇಲ್ ನಾಲಾ ಎಂದು ಹೆಸರು. ಅದಕ್ಕೆ ನಾವಿಟ್ಟ ಹೆಸರು ಚರಂಡಿ ಎಂದು. ಇದಕ್ಕಿಂತ ಉತ್ತಮ ಶಬ್ದ ನಮ್ಮಲಿಲ್ಲ. ಇದ್ದರೆ ನೀವೆ ನಾಮಕರಣ ಮಾಡಿಬಿಡಿ.

WDWD
ನಂಬಿದರೆ ನಂಬಿ ಬಿಟ್ಟರೆ ಬಿಡಿ. ಕಳೆದ ಸುಮಾರು ವರ್ಷಗಳಿಂದ ಇಲ್ಲಿ ನಾಯಿಯಿಂದ ಕಚ್ಚಿಸಿಕೊಂಡವರು ಬರುತ್ತಿದ್ದಾರೆ ಮತ್ತು ಸ್ನಾನ ಮಾಡುತ್ತಿದ್ದಾರೆ. ಐಎಎಸ್ ಅಧಿಕಾರಿಗಳು ನಾಯಿಯಿಂದ ಕಚ್ಚಿಸಿಕೊಂಡು ಇಲ್ಲಿಗೆ ಬಂದು ಸ್ನಾನ ಮಾಡಿದ್ದಾರಂತೆ. ಎಲ್ಲ ಅಂತೆ ಕಂತೆ.

ಈ ಚರಂಡಿಯ ಒಂದು ಬದಿಯಲ್ಲಿ ಸ್ಲಮ್ ಇದೆ ಇನ್ನೊಂದು ಬದಿಯಲ್ಲಿ ನಾಯಿ ಕಚ್ಚಿಸಿಕೊಂಡವರು ಸ್ನಾನ ಮಾಡುತ್ತಾರೆ. ಪದೇ ಪದೇ ನಾಯಿ ಕಚ್ಚಿಸಿಕೊಂಡವರು ಎಂದು ಹೇಳಲಿಕ್ಕಾಗುವುದಿಲ್ಲ. ಹಾಗಾಗಿ ಇಲ್ಲಿ ಸ್ನಾನ ಮಾಡುವವರು ಎಲ್ಲರೂ ನಾಯಿ ಕಚ್ಚಿಸಿಕೊಂಡವರು ಎಂಬ ತೀರ್ಮಾನಕ್ಕೆ ಬರಬೇಕೆಂದು ಓದುಗರಲ್ಲಿ ವಿನಂತಿ.

ಈ ಚರಂಡಿ ಹುಟ್ಟುವುದು ಭಕ್ಷಿ ಕಾ ತಲಾಬ್ ಎಂಬ ಕೆರೆಯಲ್ಲಿ. ಕೆರೆ ಲಕ್ನೋದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಫೈಜಾಬಾದ್ ರಸ್ತೆಯ ಸೇತುವೆ ಕೆಳಗೆ ಸ್ನಾನ ಮಾಡಿದರೆ ನಾಯಿ ವಿಷ ಪರಿಹಾರವಾಗುತ್ತದೆ ಎಂಬ ನಂಬಿಕೆ.

ಸೇತುವೆ ಮೇಲಿನಿಂದ ಕಣ್ಣು ಹಾಯಿಸಿದರೆ ಮಕ್ಳು, ಮರಿ, ಹೆಣ್ಣು, ಗಂಡು ಎಲ್ಲ ಸರತಿಯಲ್ಲಿ ಚರಂಡಿಗೆ ಇಳಿಯುವುದನ್ನು ಕಾಣಬಹುದು. ಚರಂಡಿಗೆ ಇಳಿದ ಮೇಲೆ ಯಥಾ ಪ್ರಕಾರ ಪೂಜೆ ಪುನಸ್ಕಾರ ನಡೆಯುತ್ತವೆ. ಇಲ್ಲಿ ಕೆಲವೇ ಜನರು ಪೂಜೆ ಮಾಡುತ್ತಾರೆ. ಅಂತಹವರಲ್ಲಿ ಸಂಜಯ ಜೋಷಿ, ನೊಂದರ್ ಮತ್ತು ನೂರಜಹಾನ್ ಪ್ರಮುಖರು.

WDWD
ಸಂಜಯನನ್ನು ಮಾತನಾಡಿಸಿದರೆ ಇದ್ದುದು, ಇಲ್ಲದ್ದು ಎಲ್ಲ ಹೇಳಿದ. ಆದರೆ ವಿಶೇಷ ಪೂಜೆಯ ಬಗ್ಗೆ ಮಾತ್ರ ಪಂಡಿತೋತ್ತಮರು ಬಾಯಿ ಬಿಡಲಿಲ್ಲ. ಕೊನೆಗೆ ಚಿಕಿತ್ಸೆಗೆ ತನ್ನ ಬಳಿ ಇರುವ ಉಕ್ಕಿನ ಪಂಜನ್ನು ತೋರಿಸಿದ.

ನೂರಜಹಾನ್ ಎನ್ನುವ ಮುಸ್ಲಿಂ ಮಹಿಳೆ ಕೂಡ ಇದೇ ಕಾಯಕದಲ್ಲಿ ನಿರತಳಾಗಿದ್ದಾಳೆ. ಇವರಿಬ್ಬರ ಕುಲ ಕಸುಬು ಇದೇ ಅಂತೆ. ಸರಕಾರ ಈ ಸ್ನಾನ ಘಟ್ಟದ ಮೇಲ್ವಿಚಾರಣೆ ವಹಿಸಿಕೊಳ್ಳಬೇಕಂತೆ. ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ನಾನದ ವ್ಯವಸ್ಥೆ ಇಲ್ಲಿ ಮಾಡಬೇಕಂತೆ ಎಂದು ಅವರುಗಳು ಆಗ್ರಹಿಸುತ್ತಾರೆ.

ಸರಿ ಎಂದು ಒಂದಿಬ್ಬರು ನಾಯಿ ಕಚ್ಚಿಸಿಕೊಂಡವರನ್ನು ಮಾತನಾಡಿಸೋಣ ಎಂದು ಸ್ನಾನ ಮುಗಿಸಿಕೊಂಡು ಬಂದಿದ್ದ ಮಹ್ಮದ್ ಅಬ್ದುಲ್ ರೆಹಮಾನ್ (ಸೆಕ್ಟರ್-8 ಶಾರದಾ ನಗರ, ರಜನಿಖಂಡ್, ರಾಯಬರೈಲಿ ನಿವಾಸಿ)ಯನ್ನು ಮಾತಿಗೆಳೆದೆವು. ನನಗೆ 9 ವರ್ಷಗಳ ಹಿಂದೆ ನಾಯಿ ಕಚ್ಚಿತ್ತು. ಈಗ ನನ್ನ ಮಗನಿಗೆ ಕಚ್ಚಿದೆ. ಆಗ ನಾನು ಸ್ನಾನ ಮಾಡಿದ್ದೆ. ಈಗ ಅವನು ಮಾಡುತ್ತಿದ್ದಾನೆ ಅಷ್ಟೆ. ಮುನ್ನಾಲಾಲ್ ಗುಪ್ತಾನ ಮಗ ಅಂಕುರ್‍‌ನಿಗೂ ನಾಯಿ ಕಚ್ಚಿದೆ. ಅವರ ಯಾವನೋ ದೂರದ ಸಂಬಂಧಿಯೊಬ್ಬನಿಗೆ ನಾಯಿ ದೋಷ, ಇಲ್ಲಿ ಸ್ನಾನ ಮಾಡಿದ ನಂತರ ಪರಿವಾಗಿತ್ತಂತೆ.

WDWD
ಸ್ಥಳದ ಬಗ್ಗೆ ದಂತಕಥೆ

ಶಕ್ತಿನಗರ ವಾಸಿಗಳ ಪ್ರಕಾರ ಒಂದಾನೊಂದು ಕಾಲದಲ್ಲಿ, ಆಫಘಾನಿಸ್ತಾನದಿಂದ ಒಬ್ಬ ವ್ಯಾಪಾರಿ ತನ್ನ ನಾಯಿಯೊಂದಿಗೆ ಇಲ್ಲಿ ವ್ಯಾಪಾರಕ್ಕೆ ಎಂದು ಬಂದಿದ್ದನಂತೆ. ಬರುವಾಗ ಏನಾಗಿತ್ತು ಅಂದರೆ ಅವನು ದುಡ್ಡು ಕಳೆದುಕೊಂಡಿದ್ದ. ತಿರುಗಿ ಹೋಗಲು ಹಣವಿಲ್ಲದೆ ಒದ್ದಾಡುತ್ತಿದ್ದ ಅವನು, ಅಲ್ಲಿಯ ಜಮೀನ್ದಾರ ಬಳಿ ತನ್ನ ನಾಯಿ ಒತ್ತೆಯಿಟ್ಟು, ಹಣ ಪಡೆದು ವ್ಯಾಪಾರ ಶುರು ಮಾಡಿದನಂತೆ.

ಒಂದು ದಿನ ರಾತ್ರಿ ಜಮೀನ್ದಾರನ ಮನೆಗೆ ಕಳ್ಳರು ಕನ್ನ ಹಾಕಿ ಒಡವೆ ಹಣವನ್ನು ದೋಚಿಕೊಂಡು ಹೋದರು. ಕಳ್ಳರನ್ನು ನಿಧಾನವಾಗಿ ಹಿಂಬಾಲಿಸಿದ ನಾಯಿ, ದೋಚಿದ ಸಾಮಾನು ಇಡುವ ಸ್ಥಳ ಪತ್ತೆ ಹಚ್ಚಿ ಜಮೀನುದಾರನನ್ನು ಮಾರನೆ ದಿನ ಬೆಳಿಗ್ಗೆ ಕರೆದುಕೊಂಡು ಹೋಗಿ, ದೋಚಿದ ಒಡವೆ ಪುನಃ ಮಾಲೀಕನಿಗೆ ಸಿಗುವಂತೆ ಮಾಡಿತು. ಇದರಿಂದ ಸಂತೃಪ್ತಿಗೊಂಡ ಜಮೀನುದಾರ ನಾಯಿಯನ್ನು ಬಿಟ್ಟು ಬಿಟ್ಟನು.



WDWD
ಸ್ವಲ್ಪ ದಿನ ಕಳೆದ ನಂತರ ಅಫಘಾನಿಸ್ತಾನದ ಪಠಾಣ ಹಿಂತಿರುಗಿ ಬಂದು ನಾಯಿಯನ್ನು ಕೇಳಿದ. ಇಲ್ಲ ನಾನಾಗಲೆ ಅದನ್ನು ಬಿಟ್ಟುಬಿಟ್ಟಿದ್ದೇನೆ ಎಂದು ಜಮೀನುದಾರ ಹೇಳಿದ. ನಾಯಿಯನ್ನು ಹುಡುಕುತ್ತ ಹೊರಟ ಪಠಾಣ. ಆಕಸ್ಮಿಕವಾಗಿ ದಾರಿಯಲ್ಲಿ ಅಂಡಲೆಯುತ್ತಿದ್ದ ನಾಯಿ ಕಂಡಿತು. ಕರೆದ ಅದು ಓಡಿ ಬಂತು. ಸಿಟ್ಟಿನಿಂದ ಪಠಾಣ ಬಾವಿಯಲ್ಲಿ ಬಿದ್ದು ಸಾಯಿ ಎಂದು ಹೇಳಿದ. ಪಾಪದ ನಾಯಿ ಬಿದ್ದು ಸತ್ತಿತು. ಆಮೇಲೆ ಅಯ್ಯೋ ನನ್ನ ಕರ್ಮವೇ ನಾಯಿಯನ್ನು ಕೊಂದೆನೇ ಎಂದು ದುಃಖಿಸಿದ. ಅಳಬೇಡ ಮಾಲಿಕ, ನಾನು ಸತ್ತರೂ ಪರವಾಗಿಲ್ಲ ನಾನು ಬಿದ್ದ ಬಾವಿಯಲ್ಲಿ ನಾಯಿ ಕಚ್ಚಿಸಿಕೊಂಡವರು ಸ್ನಾನ ಮಾಡಿದರೆ ಶ್ವಾನ ದೋಷ ಪರಿಹಾರವಾಗುತ್ತದೆ ಎಂದು ನಾಯಿಯ ಆತ್ಮ ಹೇಳಿತು. ನಾಯಿ ಬಿದ್ದ ಬಾವಿಯ ಜಾಗದಿಂದ ಕುಕ್ರೆಲ್ ಚರಂಡಿ ಪ್ರಾರಂಭವಾಗುತ್ತದೆ.

ವೈಜ್ಞಾನಿಕ ದೃಷ್ಟಿಕೋನ

WDWD
ಡಾ. ಹನೀಬ್ ಅವರ ಪ್ರಕಾರ, ಈ ನಂಬಿಕೆಯಲ್ಲಿ ಯಾವುದೇ ಸತ್ಯವಿಲ್ಲ. ನಾಯಿ ಕಡಿತದಿಂದ ರೇಬಿಸ್ ರೋಗ ಬರುತ್ತದೆ. ರೇಬಿಸ್ ವೈರಾಣುಗಳು ಬೆನ್ನು ಮೂಳೆಯ ಮೂಲಕ ಮೆದುಳು ಪ್ರವೇಶಿಸಿ, ಮನುಷ್ಯನ ನರ ವ್ಯವಸ್ಥೆಯನ್ನು ಹಾಳುಗೆಡವುತ್ತದೆ.

ಕೆಲ ಸಂದರ್ಭಗಳಲ್ಲಿ ಈ ರೋಗದ ಪತ್ತೆ ತಿಂಗಳಿಂದ ಹಿಡಿದು ಹತ್ತು ವರ್ಷದ ನಂತರವೂ ಆಗಬಹುದು. ಈ ರೋಗದ ಚುಚ್ಚು ಮದ್ದು ದುಬಾರಿಯಾಗಿರುವುದರಿಂದ ಸಾಮಾನ್ಯ ನಾಗರಿಕರು ಪರ್ಯಾಯ ಔಷಧ ಬಳಸುತ್ತಾರೆ ಎಂದು ಹೇಳಿದ್ದಾರೆ.

ಒಂದು ವೇಳೆ ನಾಯಿ ಕಡಿದರೆ ಮೊದಲು ಸ್ನಾನ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ ಆದರೆ ಇಂತಹ ಕೊಳಚೆ ಗುಂಡಿಯಲ್ಲಿ ಮಾತ್ರ ಅಲ್ಲ.