ಹೆಬ್ಬೆಟ್ಟು ಒತ್ತಿ ಭವಿಷ್ಯ ತಿಳಿಯಿರಿ!

WD
ಭಾರತದಲ್ಲಿ ಅನೇಕ ವಿಧದ ಜ್ಯೋತಿಷ್ಯ ಪ್ರಕಾರಗಳಿವೆ. ಹಸ್ತ ಸಾಮುದ್ರಿಕ, ಸಂಖ್ಯಾಶಾಸ್ತ್ರ, ಗ್ರಹಕುಂಡಲಿ ಮುಂತಾದವುಗಳು ಪ್ರಮಖವಾದವುಗಳು. ನೂರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ನಾಡಿ ಜ್ಯೋತಿಷ್ಯ ಕೂಡ ಒಂದು.

ನಂಬಿದರೆ ನಂಬಿ ಬಿಟ್ಟರೆ ಬಿಡಿ ಪಯಣದಲ್ಲಿ ಈ ಬಾರಿ ನಾವು ವೈಧೀಶ್ವರಂ ದೇವಾಲಯಕ್ಕೆ ತಮ್ಮನ್ನು ಕರೆದುಕೊಂಡು ಹೋಗುತ್ತಿದ್ದೇವೆ. ವೈಧೀಶ್ವರಂ ಮಂದಿರದ ವೈಶಿಷ್ಠ್ಯ ಎಂದರೆ ಈ ದೇವಾಲಯದ ಸುತ್ತಲೂ ನೂರಾರು ಕುಟುಂಬಗಳಿವೆ. ಅವುಗಳಿಗೆ ಜ್ಯೋತಿಷ್ಯ ಹೇಳುವುದು ಜೀವಾನಾಧಾರ ವೃತ್ತಿ . ಅಂದ ಮಾತ್ರಕ್ಕೆ ಬೇಕಾ ಬಿಟ್ಟಿ ದುಡ್ಡು ಕೀಳುತ್ತಾರೆ ಎಂದು ತಿಳಿಯಬೇಕಾಗಿಲ್ಲ. ಅವರು ಹೇಳಿದ್ದು ನೂರಕ್ಕೆ ನೂರು ಸರಿಯಾಗಿದ್ದರೆ ಮಾತ್ರ ನೀಡಿದ ಸೇವೆಗೆ ದುಡ್ಡು ತೆಗೆದುಕೊಳ್ಳುತ್ತಾರೆ.

ಇಲ್ಲಿನವರು ನುಡಿಯುವ ಕಣಿ ಪದ್ದತಿಗೆ ನಾಡಿ ಜ್ಯೋತಿಷ್ಯ ಎಂದು ಹೇಳಲಾಗುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ವಾಸವಾಗಿದ್ದ ಅಗಸ್ತ್ಯ ಮಹರ್ಷಿಯು ಈ ಜ್ಯೋತಿಷ್ಯ ಶಾಸ್ತ್ರವನ್ನು ಕಂಡುಹಿಡಿದ. ಈಗಲೂ ಋಷಿಮುನಿಗಳು ಬರೆದಿಟ್ಟಿರುವ ತಾಳೆಗ್ರಂಥಗಳಲ್ಲಿನ ಮಾಹಿತಿಯನ್ನು ಆಧರಿಸಿ ಇಲ್ಲಿನವರು ಭವಿಷ್ಯ ಹೇಳುತ್ತಾರೆ.

WD
ಹಸ್ತ ಸಾಮುದ್ರಿಕೆಯಲ್ಲಿ ಇರುವಂತೆ ಈ ಪದ್ದತಿಯಲ್ಲಿ ಕೂಡ ಪುರುಷರ ಬಲ ಭಾಗಕ್ಕೆ ಮತ್ತು ಮಹಿಳೆಯರ ಎಡಭಾಗಕ್ಕೆ ಆದ್ಯತೆ ನೀಡಲಾಗುತ್ತದೆ. ಹೆಬ್ಬೆರಳ ಗುರುತು ಮನುಷ್ಯನಿಂದ ಮನುಷ್ಯನಿಗೆ ಬೇರೆ ಇರುತ್ತದೆ ಎನ್ನುವ ವೈಜ್ಞಾನಿಕ ಸಂಶೋಧನೆ ಇಲ್ಲಿಯೂ ಅನ್ವಯವಾಗುತ್ತಿದ್ದು. ಆ ಆಧಾರದ ಮೇಲೆ ತೆಗೆದುಕೊಳ್ಳಲಾಗುವ ಹೆಬ್ಬೆರಳ ಗುರುತು ಬಳಸಿಕೊಂಡು ಅವರ ಇಂದಿನ ವಂಶದ ಚರಿತ್ರೆಯನ್ನು ಬಿಡಿಸಿ ಇಡಲಾಗುತ್ತದೆ. ಭೂತಕಾಲದ ಘಟನೆಗಳನ್ನು ಹೇಳಿದ ನಂತರ ನಾಡಿ ಜ್ಯೋತಿಷ್ಯ ಶಾಸ್ತ್ರ ಹೇಳುವವರು ಭವಿಷ್ಯದ ಕುರಿತು ವಿವರ ನೀಡುತ್ತಾರೆ.

WD
ಅಲ್ಲಿನ ಓರ್ವ ನಾಡಿ ಜ್ಯೋತಿಷಿ ಕೆ. ವಿ. ಬಾಬುಸ್ವಾಮಿ ಪ್ರಕಾರ ಹೆಬ್ಬೆರುಳು ಗುರುತಿನಲ್ಲಿ 108 ಪ್ರಕಾರಗಳಿದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಿರುವ ತಾಳೆಗರಿಗಳಲ್ಲಿ ಬರೆದಿರುವ ವ್ಯಾಖ್ಯಾನಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು ಎಂದು ಮಾಹಿತಿ ನೀಡಿದರು.

ಇಷ್ಟೆಲ್ಲ ಅವನು ಹೇಳಿದ ಮೇಲೆ ನಾವು ಸುಮ್ಮನೆ ಕುಳಿತುಕೊಳ್ಳಲಾಗುತ್ತದೆಯೇ? ಉಹೂಂ ಸಾಧ್ಯವಿಲ್ಲ. ನಾವು ಒಂದು ಕೈ ನೋಡಿಯೇ ಬಿಡುವಾ ಎಂದುಕೊಂಡು ನಮ್ಮವರೇ ಒಬ್ಬರು ಭವಿಷ್ಯ ಕೇಳುವುದಕ್ಕೆ ಮುಂದಾದರು. ಸರಿ ಎಂದು ಹೆಬ್ಬೆರಳು ಒತ್ತಿದ ಮೇಲೆ, ಇದು ಶಂಖ ಗುರುತು ಎಂದು ಬಾಬುಸ್ವಾಮಿ ಹೇಳಿದವನೆ ಒಳಗೆ ಹೋಗಿ ಒಂದಷ್ಟು ತಾಳೆಗರಿಗಳನ್ನು ತಂದ.

WD
ಅವನು ಮೊದಲು ಹೇಳಿದ್ದಿಷ್ಟು- ನಾನು ಕೇಳುವ ಪ್ರಶ್ನೆಗಳಿಗೆ ಹೌದು, ಇಲ್ಲ ಇವೆರಡು ಉತ್ತರ ಮಾತ್ರ ಬರಬೇಕು ದುಸರಾ ಮಾತೇ ಇಲ್ಲ ಎಂದ.

ಸರಿ ಎಂದು ನಮ್ಮವರು ತಲೆಯಾಡಿಸಿದರು.

WD
ಮೊದಲ ಪ್ರಶ್ನೆಗೆ ಇಲ್ಲ ಉತ್ತರ, ಎರಡನೆಯದಕ್ಕೂ ಅದೇ. ಸಾಲಾಗಿ ಬರೋಬ್ಬರಿ ಹತ್ತು ಎಲೆಗಳಿಗೆ ಇದೇ ಉತ್ತರ. ಅಯ್ಯೋ ದೇವರೆ‍‍! ಇದೇನು ನಾಡಿ ಜ್ಯೋತಿಷಿಯ ನಾಡಿ ಬಡಿತ ತಪ್ಪುವಂತೆ ಆಗುತ್ತಿದೆಯಲ್ಲ. ಇಂವ ಬಿಟ್ಟದ್ದು ಬರಿ ಬೂಸಾ ಮಾತ್ರ ಅಂದುಕೊಂಡಿದ್ದೆವು.

ಆಮೇಲೆ ಬಂತು ನೋಡಿ ಉತ್ತರ:

ನೀನು ಸ್ನಾತಕೋತ್ತರ ಪದವೀಧರ - "ಹೌದು"

ನಿನಗೆ ಯಾವುದೇ ಖಾಯಿಲೆ ಇಲ್ಲ -"ಹೌದು"

ನಿನ್ನ ಹೆಂಡತಿ ಗೃಹಿಣಿ - "ಹೌದು"

ನಿಮ್ಮಪ್ಪನಿಗೆ ಒಂದೇ ಬಾರಿ ಮದುವೆಯಾಗಿದೆ - "ಹೌದು"

ನಿನ್ನ ಮಗಳು ವಿದೇಶದಲ್ಲಿ ಓದುತ್ತಿದ್ದಾಳೆ - "ಇಲ್ಲ".

ಇಲ್ಯಾಕೋ ರೈಲು ಪಟರಿ ಬಿಟ್ಟು ಕೆಳಗಿಳಿದ ಹಾಗೆ ಆಯಿತು.

WD
ಮತ್ತು ಒಂದು ಹತ್ತು ಪ್ರಶ್ನೆ ಕೇಳಿದ ಎಲ್ಲದಕ್ಕೂ ಇಲ್ಲ ಉತ್ತರ ಬಂದ ಮೇಲೆ ಅವನಿಗೂ ತಲೆ ತಿರುಗಿರಬೇಕು. ಒಳಗೆ ಮತ್ತೊಂದು ಕಟ್ಟು ತರೋದಕ್ಕೆ ಹೋದ. ನಮ್ಮ ಅದೃಷ್ಟಾನೋ ಅವನ ಅದೃಷ್ಟಾನೋ, ಸಿಗಬೇಕಾದ ತಾಳೆಗ್ರಂಥ ಸಿಗಲಿಲ್ಲ. ಬರಿಗೈಯಲ್ಲಿ ಬಂದು, ಮರೀ ನಿನ್ನ ನಸೀಬು ಖರಾಬ್ ಐತೆ, ಇನ್ನೊಂದು ದಿನ ಬಾ ಹೋಗು ಎಂದ.

ಖರೆ ಮನಸ್ನಿಂದ ಬಂದ್ರೆ ಮಾತ್ರ ಉತ್ತರ ಸರಿಯಾಗಿರ್ತದೆ ಎಂದೂ ಹೇಳಿದ ಅನ್ನಿ.

ಆದರೂ ಒಂದು ಆಶ್ಚರ್ಯ ಅಂದ್ರೆ ಕೋಟ್ಯಾನುಕೋಟಿ ಮಾನವ ಜೀವಿಗಳ ಭವಿಷ್ಯವನ್ನು ಅದು ಹೇಗೆ ತಾಳೆಗರಿಗಳಲ್ಲಿ ನಮ್ಮ ಋಷಿಗಳು ಅಷ್ಟು ಕರಾರುವಾಕ್ ಆಗಿ ಬರೆದಿದ್ದಾರೆ? ನಿಮಗೇನು ಅನ್ನಿಸುತ್ತದೆ ನಮಗೆ ಬರೆದು ತಿಳಿಸಿ.