ಮಿಸ್, ಮಿಸ್‌ಯೂಸ್, ಮಿಸ್ಟೇಕ್..? ಇದು ಉಪ್ಪಿ 'ಸೂಪರ್' ಬಿಟ್ಸ್

PR
ಮಿಸ್, ಮಿಸ್‌ಯೂಸ್, ಮಿಸ್‌ಗೈಡ್, ಮಿಸ್‌ಟೇಕ್, ಮಿಸ್‌ಫೈರ್, ಡಿಸ್‌ಮಿಸ್, ಮಿಸ್‌ಅಂಡರ್‌ಸ್ಟ್ಯಾಂಡ್... ಇದು ಉಪ್ಪಿಯ ಬಹುನಿರೀಕ್ಷಿತ 'ಸೂಪರ್' ಚಿತ್ರದ ಜಾಹೀರಾತುಗಳಲ್ಲಿ ಕಂಡು ಬರುತ್ತಿರುವ ಕೆಲವು ಪದಗಳು. ಏನನ್ನೂ ಸ್ಪಷ್ಟವಾಗಿ ಹೇಳದೆ ಕುತೂಹಲ ಕೆರಳಿಸುತ್ತಾ ಗಿಮಿಕ್‌ಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿದೆ.

ಆರಂಭದಲ್ಲಿ ಚಿತ್ರದ ನಿರ್ಮಾಪಕರ (ರಾಕ್‌ಲೈನ್ ವೆಂಕಟೇಶ್) ಹೆಸರನ್ನು ಕಲ್ಲು, (Rock) ಗೆರೆ (Line) ಮತ್ತು ತಿರುಪತಿ ವೆಂಕಟೇಶನ (Venkatesh) ಚಿತ್ರಗಳನ್ನು ಹಾಕಿ ಮೆದುಳಿಗೆ ಕೆಲಸ ಕೊಟ್ಟಿದ್ದ ಉಪ್ಪಿ ಈಗ, ತನ್ನ ಮುಖವುಳ್ಳ ಜಾಹೀರಾತಿನಲ್ಲಿ ಕಣ್ಣುಗಳ ಜಾಗದಲ್ಲಿ ಕಿವಿಗಳನ್ನು ಅಂಟಿಸಿದ್ದಾರೆ.

ಮತ್ತೊಂದು ಜಾಹೀರಾತಿನಲ್ಲಿ ಎರಡು ಚಿತ್ರಗಳನ್ನು ಅಕ್ಕ-ಪಕ್ಕದಲ್ಲಿ ಮುದ್ರಿಸಿ, ಇದನ್ನು ತದೇಕಚಿತ್ತದಿಂದ ಮೆಳ್ಳೆಗಣ್ಣಿನಿಂದ ಎರಡು ಮಾಡಿ ನೋಡಿ -- ನಿಮಗೆ 3ಡಿ ಅನುಭವವಾಗುತ್ತದೆ ಎಂದು ಅಡಿ ಬರಹ ಕೊಟ್ಟಿದ್ದಾರೆ. ಇವೆಲ್ಲದರಿಂದಾಗಿ ಅಭಿಮಾನಿಗಳಂತೂ ತುದಿಗಾಲಿನಲ್ಲಿ ನಿಂತಿದ್ದಾರೆ.

ನವೆಂಬರ್ 19ಕ್ಕೆ ಆಡಿಯೋ ಬಿಡುಗಡೆ...
ಸದಾ ಗಿಮಿಕ್‌ಗಳನ್ನು ಮಾಡುತ್ತಾ ಒಂದು ವರ್ಗದ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡಿರುವ ಉಪೇಂದ್ರ ಮೇನಿಯಾಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಹತ್ತು ವರ್ಷಗಳ ನಂತರ ನಿರ್ದೇಶಕನ ಟೋಪಿಗೆ ಮರಳಿ ತಲೆ ತೂರಿಸಿರುವ ಉಪ್ಪಿ ನಿರ್ದೇಶನ, ನಟನೆಯ 'ಸೂಪರ್' ಎಂದು ಹೇಳಲಾಗುತ್ತಿರುವ ಹೆಸರಿನ ಚಿತ್ರದ ಧ್ವನಿಸುರುಳಿ ನವೆಂಬರ್ 19ರಂದು ಶುಕ್ರವಾರ ಬಿಡುಗಡೆಯಾಗಲಿದೆ.
PR

ಈ ಹಿಂದೆ ಉಪ್ಪಿಯ 'ಎ' ಮತ್ತು 'ಉಪೇಂದ್ರ' ಚಿತ್ರಗಳ ಆಡಿಯೋ ಮಾರುಕಟ್ಟೆಗೆ ತಂದಿದ್ದ ಮಧು ಬಂಗಾರಪ್ಪನವರ 'ಆಕಾಶ್ ಆಡಿಯೋ' ಕಂಪನಿಯು ಸೂಪರ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದಿದೆ. ಮೂಲಗಳ ಪ್ರಕಾರ ಆಡಿಯೋ ಹಕ್ಕುಗಳು ಬರೋಬ್ಬರಿ 1.25 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.

ನವೆಂಬರ್ 19ರಂದು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆಯುವ ವರ್ಣರಂಜಿತ, ಅದ್ಧೂರಿ ಸಮಾರಂಭದಲ್ಲಿ ಧ್ವನಿಸುರುಳಿ ಬಿಡುಗಡೆಯಾಗಲಿದೆ. ಹಲವು ಜನಪ್ರಿಯ ನಟ-ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಪೇಂದ್ರ-ನಯನತಾರಾ ತಾರಾಗಣವಿರುವ ಚಿತ್ರ ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿದೆ ಎಂದು ಆರಂಭದಲ್ಲಿ ಹೇಳಲಾಗುತ್ತಿತ್ತು. ಆದರೆ ಕೆಲ ದಿನಗಳ ಬಳಿಕ ಹಿಂದಿಯನ್ನು ಕೈ ಬಿಡಲಾಯಿತು. ಈಗ ತಮಿಳನ್ನು ಕೂಡ ಬದಿಗೆ ಸರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಮತ್ತು ತೆಲುಗು ಅವತರಣಿಕೆಗಳು ಮಾತ್ರ ಏಕಕಾಲದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಬಿಡುಗಡೆಯಾಗಲಿವೆ. ಡಿಸೆಂಬರ್ 3 ಅಥವಾ 10ರಂದು ಚಿತ್ರ ಬಿಡುಗಡೆಯಾಗಬಹುದು ಎಂದು ಗಾಂಧಿನಗರ ಹೇಳುತ್ತಿದೆ.

ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕಳೆಗಟ್ಟಲು ಮಧು ಬಂಗಾರಪ್ಪ ಮತ್ತು ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವಿರತ ಶ್ರಮ ವಹಿಸುತ್ತಿದ್ದಾರೆ.

ಯೋಗರಾಜ್ ಭಟ್, ವಿ. ಮನೋಹರ್ ಮತ್ತು ಸ್ವತಃ ಉಪೇಂದ್ರ ಲೇಖನಿಯಲ್ಲಿ ಮೂಡಿರುವ ಹಾಡುಗಳಿಗೆ ಪ್ರಸಕ್ತ ಜನಪ್ರಿಯ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಟ್ಟುಗಳನ್ನು ಹಾಕಿದ್ದಾರೆ. ತನ್ನ ಖಾಯಂ ಸಂಗೀತಕಾರ ಗುರುಕಿರಣ್ ಕೈಬಿಟ್ಟಿರುವ ಉಪ್ಪಿಗೆ ಈ ಬಾರಿ ಯಶಸ್ಸು ಒಲಿಯುವುದೋ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಉಪ್ಪಿ ಅಭಿಮಾನಿಗಳನ್ನು ರಂಜಿಸುವ ಭರವಸೆ ಹರಿಕೃಷ್ಣರಲ್ಲಿದೆ.

ವೆಬ್ದುನಿಯಾವನ್ನು ಓದಿ