ಯುವ ಪೀಳಿಗೆಯ ಶಿರಕ್ಕೆರಗಿದೆ ಹೇರ್‌ಕಲರ್ ದಾಳಿ

ND
ಕಾಳವರ್ಣದ ನೀಲವೇಣಿಯಯರು ಇಂದು ಕಾಣಸಿಗುವುದು ಬಲು ವಿರಳ, ಇಂದಿನ ಆದುನಿಕ ಜಗತ್ತಿನಲ್ಲಿ ವರ್ಣಮಯ ಕೂದಲು ಹೊಸ ಟ್ರೆಂಡ್. ಫ್ಯಾಶನೇಬಲ್ ಆಗಿ ಕಾಣಿಸಿಕೊಳ್ಳಲೋಸುಗ ಕೂದಲಿಗೆ ಬಣ್ಣ ಹಚ್ಚುವ ಯುವತಿಯರ ಸಂಖ್ಯೆ ಇಂದು ಹೆಚ್ಚಿದೆ.

ಇದುವರೆಗೆ ಐ ಶೇಡ್‌ಗಳ ಮೂಲಕ ಕಣ್ ರೆಪ್ಪೆಗಳಿಗೆ ವಿವಿಧ ರಂಗು ನೀಡುತ್ತಿದ್ದ ಲಲನೆಯರು ಇದೀಗ ಕೂದಲಿನ ಬಣ್ಣವನ್ನೂ ಬದಲಿಸತೊಡಗಿದ್ದಾರೆ. ಫ್ಯಾಶನ್ ಪ್ರಿಯ ಯುವತಿಯರಿಗಾಗಿ ಮಾರುಕಟ್ಟೆಯಲ್ಲಿ ವಿವಿಧ ತೆರನಾದ ವರ್ಣಮಯ ಹೇರ್‌ಕಲರ್‌ಗಳು ಲಭ್ಯ. ಇದರಿಂದಾಗಿ ಅವರು ಮನಕ್ಕೊಪ್ಪಿದ ಬಣ್ಣವನ್ನು ತಮ್ಮ ಕೂದಲಿಗೆ ಹಚ್ಚಿಸಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ಲುಕ್ ನೀಡುವುದು ಸಾಧ್ಯವಿದೆ.

ಇದುವರೆಗೆ ಕ್ಯಾಟ್‌ವ್ಯಾಕ್ ಮಾಡುವ ಮಾಡೆಲ್‌ಗಳ ಕೂದಲುಗಳಷ್ಟೇ ವರ್ಣಮಯವಾಗಿರುತ್ತಿದ್ದವು. ಆದರೆ ಈಗ ನಮ್ಮ-ನಿಮ್ಮಂತವರೂ ಸಹ ಕೂದಲಿಗೆ ಸಿಂಗಲ್ ಕಲರ್ ಅಥವಾ ಮಲ್ಟಿ ಕಲರ್ ಮೆತ್ತಿಸಿಕೊಂಡು ಸಾಮಾನ್ಯರಿಗಿಂತ ಬೇರೆಯಾಗಿ ನಿಲ್ಲಬಹುದು.

ಟ್ರೆಂಡಿ ಮತ್ತು ಆಕರ್ಷಕವಾಗಿ ಕಾಣಿಸುವುದಕ್ಕಿರುವ ಉತ್ತಮ ಉಪಾಯ ಈ ಹೇರ್ ಕಲರ್‌, ಅದಕ್ಕೆಂದೇ ಮಾರುಕಟ್ಟೆಯಲ್ಲಿ ನೀಲಿ, ಕೆಂಪು ಮುಂತಾದ ವಿಧವಿಧದ ಹೇರ್‌ಕಲರ್‌ಗಳು ಯುವತಿಯರ ಶಿರಕ್ಕೆರಗಲು ಸಾಲುಗಟ್ಟಿವೆ. ಜನರ ದಂಡಿನಲ್ಲಿ ಎದ್ದು ಕಾಣುವಂತೆ ಮಾಡುವ ಬಣ್ಣದ ಕೂದಲು ಇಂದಿನ ಯುವ ಜನಾಂಗದ ಹೊಸ ಫ್ಯಾಶನ್.

ನಿಮ್ಮ ಸೌಂದರ್ಯಕ್ಕೆ ಮೆರಗು ನೀಡಲು, ಮಾರುಕಟ್ಟೆಯಲ್ಲಿ ಹೇರ್‌ಕಲರ್‌ಗಳ ಸಂತೆಯೇ ಇದೆ. ನೀಲಿ, ಕೆಂಪು, ಕಂದು, ಮೆರೂನ್ ಇತ್ಯಾದಿ ಬಣ್ಣಗಳಲ್ಲಿ ಇವು ಲಭ್ಯವಿವೆ. ನಿಮಗಿಷ್ಟವಾಗುವ ಹೇರ್ ಕಲರ್‌ ಅನ್ನು ಆರಿಸಿಕೊಳ್ಳಬಹುದು.
ND


ಮಾರುಕಟ್ಟೆಯಲ್ಲಿ ಶಾಶ್ವತ ಮತ್ತು ತಾತ್ಕಲಿಕವಾಗಿರುವ ಎರಡು ತೆರನಾದ ಹೇರ್‌ಕಲರ್‌ಗಳು ಲಭ್ಯವಿವೆ. ನೀವು ಸ್ವಲ್ಪ ಕಾಲದವರೆಗಷ್ಟೇ ವರ್ಣವೇಣಿಯಾಗಿರಲು ಬಯಸುವುದಾದಲ್ಲಿ ತಾತ್ಕಲಿಕ ಹೇರ್‌ಕಲರ್ ಸೂಕ್ತವೆನಿಸುತ್ತದೆ. ಬಹಳ ಸಮಯದವರೆಗೆ ಕೂದಲಿನ ಬಣ್ಣವನ್ನು ಉಳಿಸಿಕೊಳ್ಳಲು ಬಯಸುವುದಾದರೆ ಶಾಶ್ವತ ಹೇರ್ ಕಲರ್‌ಗಳ ಉಪಯೋಗವನ್ನು ನೀವು ಪಡೆಯಬಹುದು.

ಈ ವಿಷಯಗಳ ಬಗ್ಗೆ ಗಮನವಿರಲಿ:
* ಮೊದಲ ಸಲ ಕೂದಲಿಗೆ ಬಣ್ಣಹಚ್ಚುವ ವೇಳೆ ಉತ್ತಮ ಪಾರ್ಲರ್ ಅಥವಾ ಸೆಲೂನ್‌ನಲ್ಲಿಯೇ ಕಲರಿಂಗ್ ಮಾಡಿಸಿ.

*ಮೊದಲು ಸ್ವಲ್ಪ ಕೂದಲಿಗಷ್ಟೇ ಬಣ್ಣ ಹಚ್ಚಿ.

*ನಿಮ್ಮ ತ್ವಚೆಗೆ ಹೊಂದುವ ಹೇರ್ ಕಲರ್ ಅನ್ನು ಆರಿಸಿ.

*ಕೂದಲಿಗೆ ಬಣ್ಣ ಹಚ್ಚುವ ವೇಳೆ ನಿಮ್ಮ ಕಣ್ಣುಗಳ ಪೂರ್ಣ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಿ.

*ಹೇರ್ ಕಲರ್ ಮಾಡುವ ಮೊದಲು ಮತ್ತು ನಂತರ ಕೂದಲಿಗೆ ಕಂಡೀಶನರ್ ಹಚ್ಚುವುದನ್ನು ಮರೆಯದಿರಿ.

*ತೀಕ್ಷ್ಣ ಬಿಸಿಲಿನಿಂದ ನಿಮ್ಮ ಕಲರ್ ಮಾಡಿದ ಕೂದಲು ಹಾಳಾಗಬಹುದು ಆದ್ದರಿಂದ, ಕೂದಲನ್ನು ಬಿಸಿಲಿನಿಂದ ರಕ್ಷಿಸಿ.

*ಯಾವಾಗಲೂ ಉತ್ತಮ ಬ್ರಾಂಡ್‌ನ ಹೇರ್ ಕಲರ್ ಅನ್ನೇ ಉಪಯೋಗಿಸಿ.