ಮುಖದ ಸೌಂದರ್ಯಕ್ಕೆ ಐದು ಸೂತ್ರ

IFM
ಮುಖದ ಸೌಂದರ್ಯವನ್ನು ಇನ್ನಷ್ಟು ಚೆಂದಗಾಣಿಸಲು, ಹೊಳೆಯುವಂತೆ ನಯವಾಗಿ ಮಾಡಲು ಮನೆಯಲ್ಲೇ ಐದು ಸೂತ್ರಗಳನ್ನು ಅನುಸರಿಸಿದರೆ ಸಾಕು. ಹೀಗೆ ಮಾಡಿದಲ್ಲಿ ಸೌಂದರ್ಯಕ್ಕೆ ಮತ್ತೊಬ್ಬ ಬ್ಯೂಟೀಶಿಯನ್ ಅಗತ್ಯ ಬೀಳುವುದಿಲ್ಲ.

ಈ ಸೂತ್ರಕ್ಕೆ ಕೇವಲ 45 ನಿಮಿಷ ಪುರುಸೊತ್ತು ಮಾಡಿಕೊಂಡರೆ ಸಾಕು. ಉತ್ತಮ ಪರಿಣಾಮಕ್ಕೆ ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮಾಡಿದರೂ ಸಾಕು. ಇದು ಸಾಮಾನ್ಯವಾದ ದುಬಾರಿಯಲ್ಲದ ಹಾಗೂ ಅಷ್ಟೇ ಆರೋಗ್ಯಕರವಾದ, ಯಾವುದೇ ಅಡ್ಡ ಪರಿಣಾಮವಿಲ್ಲದ ಸೂತ್ರ. ಅಷ್ಟೇ ಅಲ್ಲದೆ, ಇದರಿಂದ ನಾವು ಮೂರು ತಿಂಗಳಲ್ಲೇ ಹೊಳೆಯುವ ನುಣುಪು ತ್ವಚೆ ಪಡೆಯಬಹುದು.

1. ಕ್ಲೆನ್ಸಿಂಗ್- ಉತ್ತಮ ಕ್ಲೆನ್ಸಿಂಗ್ ಮಾಡುವುದರಿಂದ ಚರ್ಮದಲ್ಲಿದ್ದ ಕೊಳೆ, ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಜತೆಗೆ ಚರ್ಚದಲ್ಲಿರುವ ನೈಸರ್ಗಿಕ ಎಣ್ಣೆಯ ಅಂಶವನ್ನು ಹಾಗೆಯೇ ಉಳಿಯಲು ಬಿಡುತ್ತದೆ. ದಿನವೂ ಮೇಕಪ್ ಬಳಸುತ್ತಿದ್ದರೆ, ಚರ್ಮದ ಪುಟ್ಟ ರಂಧ್ರಗಳಲ್ಲಿ ಉಳಿದುಬಿಡಬಲ್ಲ ಸೂಕ್ಷ್ಮ ಕೊಳಕನ್ನೂ ಕ್ಲೆನ್ಸರ್ ತೆಗೆದುಹಾಕುತ್ತದೆ. ಹಾಗಾಗಿ ಉತ್ತಮ ಬ್ರ್ಯಾಂಡ್‌ನ ಕ್ಲೆನ್ಸರ್‌ನ್ನು ಖರೀದಿಸಿ. ನೊರೆ ಬರದಂತಹ ಕ್ಲೆಂನ್ಸರ್ ಉತ್ತಮ. ಸ್ವಲ್ಪ ಪ್ರಮಾಣವನ್ನು ಮುಖಕ್ಕೆ ಹಚ್ಚಿ, ಇಡೀ ಮುಖ, ಕುತ್ತಿಗೆಗೆ ಲೇಪಿಸಿಕೊಳ್ಳಿ. ವರ್ತುಲಾಕಾರದಲ್ಲಿ ಬೆರಳಿನಲ್ಲಿ ಸ್ವಲ್ಪ ಹೊತ್ತು ಮಸಾಜ್ ಮಾಡಿ.ಒಂದೆರಡು ನಿಮಿಷ ಹಾಗೇ ಬಿಟ್ಟು, ನಂತರ ಹತ್ತಿಯಿಂದ ಅದನ್ನು ಉಜ್ಜಿ ತೆಗೆಯಿರಿ. ಚರ್ಚದ ಕೊಳೆಯೆಲ್ಲ ಹೊರಟು ಹೋಗಿರುತ್ತದೆ. ಎಣ್ಣೆ ಚರ್ಮ ಹೊಂದಿದವರು ಕ್ಲೆನ್ಸಿಂಗ್ ಮಾಡುವುದು ಉತ್ತಮ. ಹಣ್ಣಿನ ಅಥವಾ ಗೋಧಿಯ ಆಧಾರಿತ ಕ್ಲೆನ್ಸಿಂಗ್ ಮಿಲ್ಕ್ ಬಳಸಿದರೆ ಉತ್ತಮ ಫಲ ನೀಡುತ್ತದೆ.

IFM
2. ಹರ್ಬಲ್ ಫೇಶಿಯಲ್ ಸ್ಟೀಮ್- ಚರ್ಮವನ್ನು ಸ್ವಚ್ಛವಾಗಿ ಸುರಕ್ಷಿತವಾಗಿ ಇಡಬೇಕೆಂದರೆ ಅದಕ್ಕೆ ಉತ್ತಮ ವಿಧಾನವೆಂದರೆ ಸ್ವಲ್ಪ ಹೊತ್ತು ಹಬೆಯನ್ನು ಮುಖಕ್ಕೆ ಹಾಯಿಸುವುದು. ಹಬೆ ತೆಗೆದುಕೊಂಡರೆ ಮುಖದಲ್ಲಿದ್ದ ಕೊಳಕು ಕಲ್ಮಶಗಳೆಲ್ಲ ದೂರವಾಗುತ್ತದೆ. ಆದರೆ ಹಬೆ, ಮುಖದಲ್ಲಿರುವ ಅಗತ್ಯ ಎಣ್ಣೆಯ ಅಂಶವನ್ನೂ ತೆಗೆದು ಹಾಕುವ ಅಪಾಯವಿದೆ. ಆದರೂ, ಮುಖದಲ್ಲಿ ಮೊಡವೆಯ ತೊಂದರೆಯಿರುವವರು, ಎಣ್ಣೆ ಚರ್ಮವಿರುವವರು ಹಬೆಯನ್ನು ಧೈರ್ಯವಾಗಿಯೇ ತೆಗೆದುಕೊಳ್ಳಬಹುದು. ಜತೆಗೆ ಅವರಿಗೆ ಇತ್ತು ಅತ್ಯುತ್ತಮ ಕೂಡಾ. ವಯಸ್ಸಾದ ಚರ್ಮದವರು ಹಾಗೂ ಒಣ ಚರ್ಮ ಹೊಂದಿದವರು ಹಬೆಯನ್ನು ಎರಡು ಮೂರು ನಿಮಿಷಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ಎಣ್ಣೆ ಚರ್ಮದವರು 5ರಿಂದ 8 ನಿಮಿಷಗಳಷ್ಟು ಹಬೆ ತೆಗೆದುಕೊಳ್ಳಬಹುದು. ಮಿಶ್ರ ಚರ್ಮ ಹೊಂದಿದವರು ವಾರದಲ್ಲಿ ಒಮ್ಮೆ 2ರಿಂದ 3 ನಿಮಿಷ ಹಬೆ ತೆಗೆದುಕೊಂಡರೆ ಉತ್ತಮ. ಸಾಮಾನ್ಯ ಚರ್ಮ ಹೊಂದಿದವರು ಎರಡು ವಾರಕ್ಕೊಮ್ಮೆ ಐದು ನಿಮಿಷ ಹಬೆ ತೆಗೆದುಕೊಂಡರೆ ಸಾಕು. ತುಂಬ ಸೂಕ್ಷ್ಮ ಚರ್ಮದವರು ಹಬೆ ತೆಗೆದುಕೊಳ್ಳದಿರುವುದೇ ಉತ್ತಮ.

ನಿಂಬೆ ಹುಲ್ಲು, ಪುದಿನ ಅಥವಾ ಕಹಿಬೇವಿನ ಸೊಪ್ಪನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಹಬೆಯನ್ನು ಒಂದೈದು ನಿಮಿಷ ಮುಖಕ್ಕೆ ಹಿಡಿದುಕೊಳ್ಳಿ. ನಂತರ ಕೂಡಲೇ ತಣ್ಣೀರಿನಿಂದ ಮುಖ ತೊಳೆಯಿರಿ. ಕ್ಲೆನ್ಸಿಂಗ್ ಮಾಡಿದ ನಂತರ ಹೀಗೆ ಹಬೆ ತೆಗೆದುಕೊಳ್ಳುವುದರಿಂದ ಮುಖದಲ್ಲಿದ್ದ ಸಣ್ಣ ರಂಧ್ರಗಳು ತೆರೆದುಕೊಂಡು ಅಲ್ಲಿದ್ದ ಕೊಳೆಯೂ ಹೊರಗೆ ಬರುತ್ತದೆ. ಚರ್ಮ ಪರಿಶುದ್ಧವಾಗುತ್ತದೆ.

3. ಫೇಶಿಯಲ್- ಫೇಶಿಯಲ್ ಮುಖದಲ್ಲಿನ ರಕ್ತಸಂಚಾರಕ್ಕೆ ತುಂಬ ಒಳ್ಳೆಯರು. ಇದು ಚರ್ಮಕ್ಕೆ ಫ್ರೆಶ್ ರಕ್ತವನ್ನು ಪೂರೈಕೆ ಮಾಡುತ್ತದೆ. ಜತೆಗೆ ಇದು ಮುಖದಲ್ಲಿನ ಕೊಳೆಗಳನ್ನು ತೆಗೆದುಹಾಕುವ ಜತೆಗೆ ಮೊಡವೆ, ಕಪ್ಪು ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯಮಾಡುತ್ತದೆ. ಇದು ಚರ್ಮವನ್ನು ಟೋನ್ ಮಾಡುವುದಲ್ಲದೆ, ನಯಗೊಳಿಸುತ್ತದೆ. ತುಂಬ ನಮೂನೆಯ ಫೇಶಿಯಲ್‌ಗಳು ದೊರೆಯುತ್ತವೆ. ಮನೆಯಲ್ಲೇ ಮಾಡಬಲ್ಲ ಫೇಶಿಯಲ್‌ಗಳನ್ನೂ ಬಳಸಬಹುದು. ಕ್ಲೇ ಮಾಸ್ಕ್, ಹನೀ ಮಾಸ್ಕ್, ಎಗ್ ಮಾಸ್ಕ್, ಓಟ್ಸ್ ಮಾಸ್ಕ್, ಫ್ರುಟ್ಸ್ ಅಂಡ್ ವೆಜಿಟೆಬಲ್ ಮಾಸ್ಕ್‌ಗಳಿಂದ ಉತ್ತಮ ಚರ್ಮ ಪಡೆಯಬಹುದು.

4. ಫೇಶಿಯಲ್ ಸಂಪೂರ್ಣವಾಗಿ ಒಣಗಿದ ಮೇಲೆ ಅದನ್ನು ಚೆನ್ನಾಗಿ ಹದ ಬಿಸಿ ನೀರಿನಲ್ಲಿ ತೊಳೆಯಿರಿ. ಮೆದುವಾಗಿ ವರ್ತುಲಾಕಾರದಲ್ಲಿ ಬೆರಳುಗಳ ಮೂಲಕ ಬಿಸಿನೀರಿನಿಂದ ತೊಳೆಯಿರಿ. ಗಟ್ಟಿಯಾಗಿ ಉಜ್ಜಬೇಡಿ. ನಂತರ ಚರ್ಮವನ್ನು ಮಸಾಜ್ ಮಾಡಿ. ಸ್ಕ್ರಬ್ ಮಾಡಬೇಡಿ. ಫೇಶಿಯಲ್ ತೆಗೆದ ತಕ್ಷಣ ಆಸ್ಟ್ರಿಜೆಂಟ್‌ನ್ನು ಹಚ್ಚಿ. ಅದು ತೆರೆದ ಚರ್ಮದ ರಂಧ್ರಗಳನ್ನು ಮುಚ್ಚಲು ಸಹಾಯವಾಗುತ್ತದೆ.

5. ಮಾಯ್‌ಸ್ಚರೈಸರ್- ಒಂದು ಒಳ್ಳೆಯ ಮಾಯ್‌ಸ್ಚರೈಸರ್‌ನ್ನು ಮುಖಕ್ಕೆ ಹಚ್ಚಿಕೊಂಡು ಮೆದುವಾಗಿ ವರ್ತುಲಾಕಾರದಲ್ಲಿ ಮಸಾಜ್ ಮಾಡಿ. ರಿಲ್ಯಾಕ್ಸ್ ಮಾಡಿ. ನಂತರ ವಿಟಮಿನ್ ಇ ಎಣ್ಣೆ ಅಥವಾ ಐ ಕ್ರೀಮನ್ನು ಕಣ್ಣಿನ ಸುತ್ತ ಹಚ್ಚಿ. ಮೆತ್ತಗೆ ಬೆರಳಿನಿಂದ ತಟ್ಟಿ.