ಮಳೆಗಾಲದಲ್ಲಿ ಚರ್ಮದ ರಕ್ಷಣೆಯ ದಿವ್ಯಸೂತ್ರ!

IFM
ಸ್ವಾತಿ ಮುತ್ತಿನ ಮಳೆಹನಿಯೇ... ಎಂದು ಮಳೆಗಾಲದಲ್ಲಿ ಮಳೆಯಲ್ಲಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿಕೊಂಡು ನೆನೆದೀರೋ... ಜೋಕೆ. ಮಳೆ ಚೆಂದವೇನೋ ಹೌದು. ಆದರೆ. ಭೂಮಿಗೆ ಮಳೆಹನಿಯೊಂದು ತಲುಪುವಾಗ ಅದು ತನ್ನಲ್ಲಿ ವಾತಾವರಣದ ಎಷ್ಟೋ ಕಶ್ಮಲಗಳನ್ನು ಹುದುಗಿಸಿಕೊಂಡಿರುತ್ತದೆ ಎಂಬುದೂ ನೆನಪಿದ್ದರೆ ಸಾಕು. ಇದರಿಂದ ಚರ್ಮ ಮಳೆಗಾಲದಲ್ಲಿ ಸಾಕಷ್ಟು ತೊಂದರೆಗಳಿಗೆ ಸಿಕ್ಕಿಹಾಕುತ್ತದೆ. ಆದರೆ ಮಳೆಗಾಲದಲ್ಲಿ ಚರ್ಮವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಲು ಕೆಲವೇ ಕೆಲವು ತಂತ್ರಗಳನ್ನು ಅನುಸರಿಸಿದರೆ ನಿಮ್ಮ ಮಳೆಗಾಲದ ಜೀವನ ಅದ್ಭುತವಾಗಿರಬಲ್ಲದು.

ತೇವಾಂಶದಿಂದ ದೂರವಿರಿ

ಮಳೆಗಾಲದಲ್ಲಿ ಚರ್ಮಕ್ಕೆ ದೊಡ್ಡ ತೊಂದರೆಯೆಂದರೆ ತೇವಾಂಶ. ಗಾಳಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಚರ್ಮ ಒಣಗುವುದಿಲ್ಲ. ಇದರಿಂದ ಕೆಲವು ಚರ್ಮದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಯಾವಾಗ ನಿಮ್ಮ ಚರ್ಮ ಆರ್ದ್ರವಾದಂತೆ ಅನಿಸುತ್ತದೋ, ಆಗ ಒಂದು ಟಿಶ್ಯೂ ಪೇಪರ್‌ನಲ್ಲಿ ಮುಖವನ್ನು ಮೆತ್ತಗೆ ಒತ್ತಿ ಒರೆಸಿ. ಆಗ ಚರ್ಮ ಒಣಗಿದಂತೆ ಅನಿಸಿದರೆ ಮಾಯ್‌ಶ್ಚರೈಸರ್ ಹಚ್ಚಿ. ಜತೆಗೆ ಮಳೆಗಾಲಲ್ಲಿ ಚೆನ್ನಾಗಿ ಮುಖ ತೊಳೆದು ಮುಖವನ್ನು ಐಸ್ ತುಂಡಿನಿಂದ ಒಂದೈದು ನಿಮಿಷ ಉಜ್ಜಿ.

ಮಳೆಗಾಲದ ಮೊಡವೆ

ಮಳೆಗಾಲದಲ್ಲಿ ಎಣ್ಣೆ ಚರ್ಮದವರು ಅನುಭವಿಸುವ ಇನ್ನೊಂದು ತೊಂದರೆಯೆಂದರೆ ಮೊಡವೆ. ಎಣ್ಣೆ ಚರ್ಮದವರು ಮಳೆಗಾಲದಲ್ಲಿ ಸ್ವಲ್ಪ ಕಪ್ಪಾಗುತ್ತಾರೆ. ಜತೆಗೆ ಸಣ್ಣ ಸಣ್ಣ ಗುಳ್ಳೆಗಳು ಹಾಗೂ ಮೊಡವೆಗಳೇಳುತ್ತವೆ. ಇದನ್ನು ತಡೆಯಲ್ಲಿ ಎಣ್ಣೆ ಚರ್ಮ ಹೊಂದಿದವರು ಮಳೆಗಾಲದಲ್ಲಿ ಮನೆಯಲ್ಲೇ ಮಾಡಿದ ಫೇಸ್‌ಪ್ಯಾಕ್‌ಗಳನ್ನು ಬಳಸಿ. ಇದು ಹೆಚ್ಚಿನ ಎಣ್ಣೆಯನ್ನು ತೆಗೆದುಹಾಕುತ್ತದೆ. ಹಾಗೂ ಮುಖದಲ್ಲಿ ತಾಜಾತನವನ್ನು ಉಳಿಸುತ್ತದೆ. ಮಳೆಗಾಲದಲ್ಲಿ ಇಂಥವರು ಪೌಡರ್ ರೂಪದಲ್ಲಿರುವ ಸನ್‌ಸ್ಕ್ರೀನನ್ನು ಮುಖಕ್ಕೆ ಬಳಸಬಹುದು. ಒಣಚರ್ಮ ಹೊಂದಿದವರು ಕ್ರೀಂ ಮಾದರಿಯ ಸನ್‌ಸ್ಕ್ರೀನ್ ಬಳಸುವುದು ಉತ್ತಮ.

ಚರ್ಮವನ್ನು ಸ್ವಚ್ಛವಾಗಿಡಿ

IFM
ಮಳೆಗಾಲದಲ್ಲಿ ಚರ್ಮವನ್ನು ತುಂಬ ಸ್ವಚ್ಛವಾಗಿಡಬೇಕು. ಮಳೆಗಾಲದಲ್ಲಿ ಆಸ್ಟ್ರಿಜೆಂಟ್ ಬಳಕೆ ಉತ್ತಮ. ನಿಮ್ಮ ಚರ್ಮ ಯಾವುದೇ ಆಗಿದ್ದರೂ ಮಳೆಗಾಲದಲ್ಲಿ ಐಸ್ ತುಂಡಿನಿಂದ ಮುಖವನ್ನು ಒತ್ತಿ ಒರೆಸಿದ ಮೇಲೆ ಒಂದು ಉತ್ತಮ ಟೋನರ್‌ನ್ನು ಚರ್ಮಕ್ಕೆ ಬಳಸಿದರೆ ಚರ್ಮವನ್ನು ತಾಜಾ ಆಗಿಡಬಹುದು. ಒಣಚರ್ಮವಾದರೆ, ಐದು ಬಿಂದು ಚಾಮೋಮೈಲ್ ಎಣ್ಣೆಯನ್ನು ಒಂದು ಚಮಚ ಹಾಲಿನ ಜತೆಗೆ ಕಲಸಿ ಚರ್ಮವನ್ನು ಟೋನ್ ಮಾಡಿ. ಎಣ್ಣೆ ಚರ್ಮವಾದರೆ ಲ್ಯಾವೆಂಡರ್ ಎಣ್ಣೆಯ ಹತ್ತು ಬಿಂದುಗಳನ್ನು ಒಂದು ಚಮಚ ನೀರಿನಲ್ಲಿ ಮಿಶ್ರ ಮಾಡಿ ಟೋನ್ ಮಾಡಿದರೆ ಉತ್ತಮ.

ಚರ್ಮಕ್ಕೆ ಹಾನಿಯಾಗುವುದನ್ನು ತಡೆಯಿರಿ

ಮಳೆಗಾಲದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಹಾಗೂ ಮುಖಕ್ಕೆ ಮಳೆಯ ನೀರಿನೊಂದಿಗೆ ಕಶ್ಮಲಗಳೂ ಅಂಟಿಕೊಳ್ಳುತ್ತವೆ. ಇದರಿಂದ ಚರ್ಮ ಸಂಬಂಧೀ ರೋಗಗಳೂ, ಕಜ್ಜಿ, ತುರಿಕೆಗಲೂ ಬರುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ, ಮಳೆಗಾಲದಲ್ಲಿ ಹೊರಗೆ ಹೋಗಿ ಬಂದ ನಂತರ ಆಂಟಿ ಬ್ಯಾಕ್ಟೀರಿಯಲ್ ಫೇಸ್‌ ವಾಶ್ ಮೂಲಕ ಮುಖ ತೊಳೆಯಿರಿ.

ಕೂದಲ ರಕ್ಷಣೆ

ಮಳೆಗಾಲದಲ್ಲಿ ಎಂದಿಗೂ ನಿಮ್ಮ ಕೂದಲನ್ನು ಒದ್ದೆಯಾಗಲು ಬಿಡಬೇಡಿ. ಮಳೆನೀರಿನೊಂದಿಗೆ ಕಶ್ಮಲಗಳೂ ತಲೆಕೂದಲಿನೊಂದಿಗೆ ಸೇರಿ ಬುಡದಲ್ಲಿ ಹಾಗೆಯೇ ಉಳಿಯುತ್ತದೆ. ಹಾಗಾಗಿಯೇ ಮಳೆಯಲ್ಲಿ ನೆನೆದರೆ ತಲೆ ತುರಿಸಲು ಆರಂಭವಾಗುತ್ತದೆ. ಮಳೆಗಾಲದ ಸೂರ್ಯನ ಬಿಸಿಲು ಹಾಹಗೂ ಮಳೆಯ ಹನಿ ಇವುಗಳರಡೂ ಜತೆಯಾಗಿ ಕೂದಲನ್ನು ಹಾಳುಮಾಡುತ್ತದೆ. ಹಾಗಾಗಿ ಯಾವಾಗಲೂ ಮಳೆಗಾಲದಲ್ಲಿ ರೇನ್ ಕೋಟ್ ಅಥವಾ ಒಂದು ಉತ್ತಮ ಛತ್ರಿಯನ್ನು ಬಳಸಿ.

ಮಳೆಯಿಂದ ಒದ್ದೆಯಾದ ಕೂದಲನ್ನು ಖಾರವಲ್ಲದ ಅಥವಾ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ಬೇಕಿದ್ದರೆ ಕಂಡೀಶನರ್ ಕೂಡಾ ಬಳಸಿ. ಉದ್ದ ಕೂದಲಾಗಿದ್ದರೆ, ಒದ್ದೆಯಾದ ತಕ್ಷಣ ಒಣಗಿಸಿ. ಇಲ್ಲವಾದರೆ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಪ್ರವಾಸ ಹೋಗುವಾಗಲೆಲ್ಲ ಒಂಡು ಟರ್ಕಿ ಟವೆಲ್ ಹಾಗೂ ಹೇರ್‌ಡ್ರಯರ್ ಇಟ್ಟುಕೊಂಡಿರುವುದು ಒಳ್ಳೆಯದು.

ತಲೆಹೊಟ್ಟು

IFM
ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಬಂದರೆ, ಎಣ್ಣೆಯನ್ನು ಬಿಸಿ ಮಾಡಿ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಒಂದೆರಡು ಗಂಟೆ ಬಿಟ್ಟು ತೊಳೆದರೆ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಜತೆಗೆ ಕೂದಲನ್ನು ಆರೋಗ್ಯವಾಗಿಡಲು ಯಾವಾಗಲೂ ಮಲಗುವ ಮುನ್ನ ತಲೆಗೇನೂ ಹಚ್ಚಿಕೊಳ್ಳದೆ ಹಾಗೆಯೇ ಸ್ವಲ್ಪ ಹೊತ್ತು ಬೆರಳ ತುದಿಯಿಂದ ಸುರುಳಿಯಾಕಾರದಲ್ಲಿ ತಲೆಕೂದಲ ಬುಡಕ್ಕೆ ಮಸಾಜ್ ಮಾಡಿದರೆ ತಲೆಬುಡಕ್ಕೆ ರಕ್ತುಪೂರಣವಾಗುತ್ತದೆ. ಹಾಗೂ ಕೂದಲು ಆರೋಗ್ಯವಾಗುತ್ತದೆ.

ಪಾದಗಳ ರಕ್ಷಣೆ

ಮಳೆಗಾಲದ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಪಾದಗಳಿಗೆ ಹಾನಿಯಾಗುವುದು. ಮಳೆಗಾಲದ ಕೊಳಚೆಯಿಂದಾಗಿ ಹಿಮ್ಮಡಿ ಹಾಗೂ ಪಾದಕ್ಕೆ ಹಾನಿಯಾಗಿ ಬಿರುಕುಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಕಾಲು ಸುಸ್ತಾದಂತೆ, ನೋವು ಕಾಣಿಸಿಕೊಳ್ಳುತ್ತದೆ. ಹೀಗಾದಾಗಲೆಲ್ಲ ಕಾಲನ್ನು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಹೊತ್ತು ಮುಳುಗಿಸಿಡಿ. ಮಳೆಗಾಲದಲ್ಲಿ ಕಾಲಿನಿಂದ ಚಪ್ಪಲಿಯ ಕೆಟ್ಟ ವಾಸನೆಯ ಬರುತ್ತಿದ್ದರೆ ಬಿಸಿ ನೀರಿಗೆ ಲ್ಯಾವೆಂಡರ್ ಎಣ್ಣೆ, ಗುಲಾಬಿ ಎಣ್ಣೆಯನ್ನೂ ಸ್ವಲ್ಪ ಹಾಕಬಹುದು. ಇದು ಕಾಲಿನ ಚರ್ಮವನ್ನು ನಯವಾಗಿಸುತ್ತದೆ ಹಾಗೂ ಸ್ವಚ್ಛವಾಗಿಸುತ್ತದೆ.

ಸಿಂಪಲ್ ಆಗಿರಿ

ಮಳೆಗಾಲದಲ್ಲಿ ಯಾವತ್ತೂ ಸಿಂಪಲ್ ಆಗಿರುವುದೇ ಒಳ್ಳೆಯದು. ಕೂದಲನ್ನು ಸಿಂಪಲ್ ಆಗಿ ಕಟ್ಟಿಕೊಳ್ಳಿ. ಕುರ್ತಿಗಳು, ಭಾರವಾದ ಅಥವಾ ಉದ್ದವಾದ ಶಾಲ್ ಇರುವ ಚೂಡಿದಾರ್‌ಗಳನ್ನು ದೂರವಿಡಿ. ಮೆದುವಾದ ತೆಳುವಾದ ಫ್ರೆಶ್ ಲುಕ್ ಇರುವ ಬಣ್ಣಗಳ ಚೂಡಿದಾರ್ ಬಳಸಿ. ಪ್ಯಾಂಟ್ ಬಳಸುವುದಾದರೆ ಲೈಟ್‌ವೈಟ್ ಆಗಿರುವ ಮುಕ್ಕಾಲು ಪ್ಯಾಂಟ್ ಬಳಸಿ. ಉದ್ದ ಸ್ಕರ್ಟ್ ಬಳಸಬೇಡಿ. ಮೊಣಕಾಲಿನವರೆಗೆ ಬರುವ ಹಗುರ ಫ್ಯಾಷನ್ ಉಡುಪು ಅಥವಾ ಮೊಣಕಾಲಿನಿಂದ ಸ್ವಲ್ಪವೇ ಕೆಳಗಿಳಿವ ಹಗುರ ಉಡುಪು ತೊಡಿ. ಪುಟ್ಟ ಕೈಯಿರುವ ಜ್ಯಾಕೆಟ್ ಅಥವೂ ಮುಕ್ಕಾಲು ಕೈಯ ಜ್ಯಾಕೆಟ್ ಇಟ್ಟುಕೊಳ್ಳಿ. ಶೂಗಳಿಂದ ದೂರವಿರಿ. ಹಾಗೂ ಮಳೆಗಾಲಕ್ಕೆ ಬಳಕೆಯಾಗುವ ಮುಂಭಾಗ ತೆರೆದಿರುವ ಚಪ್ಪಲಿಗಳನ್ನೇ ಬಳಸಿ. ಹೆಚ್ಚು ಮೇಕಪ್ ಮಾಡಬೇಡಿ. ಕಣ್ಣಿಗೆ ಫ್ರೆಶ್ ಲುಕ್ ನೀಡುವ ನೀಲಿ, ಹಸಿರು ಬಣ್ಣದ ತೆಳು ಐಲೈನರ್‌ನಿಂದ ತೀಡಿ. ಸಮಾರಂಭಗಳಿಗೆ ಹೋಗುತ್ತಿದ್ದರೆ ವಿಪರೀತ ಆಭರಣ ಬೇಡ. ಪುಟ್ಟಪುಟ್ಟ ಕಲ್ಲುಗಳಿರುವ ಮುದ್ದಾದ ನೆಕ್ಲೆಸ್ ಸಾಕು. ಅದು ನಿಮಗೆ ಮಳೆಗಾಲದಲ್ಲೊಂದು ತಾಜಾತನ ಅನುಭೂತಿ ನೀಡುತ್ತದೆ. ನಿಮಗಷ್ಟೇ ಅಲ್ಲ ನಿಮ್ಮನ್ನು ನೋಡುವವರಿಗೂ ನೀವೂ ತಾಜಾ ಹೂವರಳಿದಂತೆ ಕಾಣುತ್ತೀರಿ..!