ನೋವು - ನಲಿವಿನ ಯುಗಾದಿ

ನಾಗೇಂದ್ರ ತ್ರಾಸಿ
PTI

ಯುಗ, ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ... ಇದು ದ.ರಾ.ಬೇಂದ್ರೆಯವರ ಕನನದ ಸಾಲುಗಳು, ಎಲ್ಲರ ಬಾಯಿಯಲ್ಲೂ ಗುಣಗುಣಿಸುವ ಈ ಹಾಡಿನಂತೆ, ಚೈತ್ರ ಮಾಸದ ಮೊದಲ ದಿನ ಹೊಸ ಯುಗದ ಆರಂಭ, ಬೇವು-ಬೆಲ್ಲದೊಂದಿಗೆ ಸಿಹಿ-ಕಹಿಯನ್ನು ತಿನ್ನುವ ಮೂಲಕ ಜೀವನದಲ್ಲಿ ಸಮರಸವೇ ಬಾಳ್ವೆ ಎಂಬ ಬದುಕಿನ ಸಂದೇಶ ಇಲ್ಲಿದೆ.

ಈ ಬಾರಿಯ ಯುಗಾದಿ ಹೊಸತು, ಹೊಸತು ತರುವ ಮೂಲಕ, ಸಿಹಿಯ ಬದಲಾಗಿ ಕಹಿಯನ್ನೇ ಹೆಚ್ಚಾಗಿ ನೀಡಿದೆ. ಮಿತಿಮೀರಿ ಏರುತ್ತಿರುವ ಬೆಲೆ ಒಂದೆಡೆಯಾದರೆ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲ ಎಂಬ ಕೊರಗು ಇನ್ನೊಂದೆಡೆ.

ಯುಗಾದಿ ಬಂತೆಂದರೆ ಪ್ರಕೃತಿಯ ಮಡಿಲ ತುಂಬ ಸಾಲು, ಸಾಲು ಹಸುರು ಕಂಗೊಳಿಸುತ್ತಿರುತ್ತದೆ. ಬೇವು-ಮಾವು-ತೆಂಗು-ಕಂಗುಗಳೆಲ್ಲ ಕಂಗೊಳಿಸುವ ಮೂಲಕ ಮತ್ತೆ ಹೊಸ ಚೈತನ್ಯ, ಮತ್ತೆ ಹೊಸ ಭವಿಷ್ಯದತ್ತ ಹೆಜ್ಜೆ ಇರಿಸುವ ಕನಸು ಕಾಣುತ್ತೇವೆ. ಅದರಲ್ಲಿಯೂ ರೈತರಿಗೆ ಪ್ರಕೃತಿಯೇ ದೇವರು.

ಆದರೆ ಪದೇ, ಪದೇ ಮುನಿಸಿಕೊಳ್ಳುವ ವರುಣನ ಅವಕೃಪೆಯಂತೂ ಈ ಬಾರಿಯ ಯುಗಾದಿ ಕಹಿ ಅನುಭವನ್ನೇ ನೀಡಿದ್ದಾನೆ. ಸಾಲ ಮಾಡಿ ಬೆಳೆ ಬೆಳೆದು ಇನ್ನೇನು ನೆಮ್ಮದಿಯ ಉಸಿರು ಬಿಡಬೇಕು ಎಂಬಷ್ಟರಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ಕಣ್ಣೇದುರೆ ಹಾಳಾದ ಬೆಳೆಯನ್ನು ಕಂಡ ಕೇರಳದ ಕುಟ್ಟನಾಡುವಿನ ಇಬ್ಬರು ರೈತರು ನೇಣಿಗೆ ಶರಣಾಗಿದ್ದಾರೆ. ಅದೆಷ್ಟೋ ಕನಸುಗಳನ್ನು ಹೊತ್ತ ರೈತ ಸಮುದಾಯ ಅಕಾಲಿಕ ಮುಸಲಧಾರೆಯಿಂದ ತತ್ತರಿಸಿ ಹೋಗಿದೆ. ಕೇಂದ್ರ ಸರಕಾರ ಘೋಷಿಸಿದ ರೈತರ ಸಾಲಮನ್ನಾ ಕೂಡ ರೈತರ ಬದುಕನ್ನು ಹಸನುಗೊಳಿಸುವ ಮಾತು ದೂರವೇ ಉಳಿದಿದೆ. ಇದೀಗ ವಿದರ್ಭದಂತಹ ಪ್ರದೇಶದ ರೈತರು ಬದುಕಿಗಿಂತ ಸಾವನ್ನೇ ಹೆಚ್ಚಾಗಿ ಪ್ರೀತಿಸತೊಡಗಿದ್ದಾರೆ!. ಅವರೆಲ್ಲರ ಬಾಳಿಗೆ ಈ ಬಾರಿಯ ಯುಗಾದಿಯೂ ಕಹಿಯನ್ನೇ ಉಣಬಡಿಸಿದೆ.

ನಿದ್ದೆಗೊಂದು ನಿತ್ಯ ಮರಣ, ಎದ್ದ ಸಲ ನವೀನ ಜನನ ಎಂಬ ಕವಿವಾಣಿಯಂತೆ ನಿಟ್ಟುಸಿರು ಬಿಡಲಾರದಂತಹ ಪರಿಸ್ಥಿತಿ ರೈತರದ್ದಾಗಿದೆ. ಸಾಲ ಮಾಡಿ ಬೆಳೆದ ಬೆಳೆಯೆ ಈ ಬಾರಿಯ ಆಕಸ್ಮಿಕವಾಗಿ ಸುರಿದ ಮುಸಲಧಾರೆಗೆ ಎಲ್ಲವೂ ನೀರಿನಲ್ಲಿ ಮಾಡಿದ ಹೋಮದಂತಾಗಿ, ಬೆಳೆದ ಬೆಳೆಗಳೆಲ್ಲಾ ನಾಶವಾಗಿದೆ. ಕಣ್ಣೆದುರು ಕೈತುಂಬಾ ಹಣದ ಕನಸನ್ನು ಕಾಣುತ್ತ ಕೈತುತ್ತು ಹಾಕಿ, ನೀರೆರೆದು ಪೋಷಿಸಿದ ಲಕ್ಷಾಂತರ ರೂಪಾಯಿಯ ದ್ರಾಕ್ಷಿ, ಕಾಫಿ, ಮುಂತಾದ ಬೆಳೆಗಳೆಲ್ಲಾ ನಾಶವಾಗಿವೆ.

ಯುಗಾದಿಯನ್ನು ಸಂಭ್ರಮದಿಂದ ಆಚರಿಸಬೇಕೆಂದಿದ್ದ ರೈತರು, ಜನಸಾಮಾನ್ಯರು ತಮ್ಮ ವಿಧಿಯನ್ನು ತಾವೇ ಹಳಿದುಕೊಳ್ಳುವಂತಾಗಿದೆ. ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಚಿನ್ನದ ಬೆಲೆ, ದಿನನಿತ್ಯದ ವಸ್ತುಗಳ ಬೆಲೆ ಸೇರಿದಂತೆ ಎಲ್ಲವೂ ತುಟ್ಟಿಯಾಗುವ ಮೂಲಕ, ಕಹಿ ಅನುಭವನ್ನೇ ನೀಡಿದೆ.

ಚಾಂದ್ರಮಾನ ಯುಗಾದಿಯಂದು ಶ್ರೀರಾಮಚಂದ್ರ ಲಂಕಾಧೀಶ್ವರ ರಾವಣನನ್ನು ವಧಿಸಿ, ಅಯೋಧ್ಯೆಗೆ ಬಂದು ಮತ್ತೆ ರಾಜ್ಯಭಾರ ನಡೆಸಿದ ಎಂಬುದು ಪ್ರತೀತಿ. ಆತನ ಆದರ್ಶದಂತೆ ಗಾಂಧಿ ಕೂಡ ಈ ದೇಶ ರಾಮರಾಜ್ಯವಾಗಬೇಕು ಎಂದು ಹಂಬಲಿಸಿದ್ದರು, ಆದರೆ ಯುಗ + ಆದಿ ಅಂದರೆ ನೂತನ ಯುಗದ ಆರಂಭ, ಅಂತಹ ಕನಸು ನನಸಾಗಬೇಕಿದ್ದರೆ ಇನ್ನೆಷ್ಟು ಯುಗ ಬೇಕೋ..ಆದರೂ ಯುಗಾದಿ ಮರಳಿ ಮರಳಿ ಬರುವಂತೆ ನಾವು ಕೂಡ ಹೊಸ ಹುರುಪಿನೊಂದಿಗೆ ರಸವೆ ಜನನ, ವಿರಸವೆ ಮರಣ, ಸಮರಸವೇ ಜೀವನ ಎಂಬ ಕವಿವಾಣಿಯಂತೆ ಎಲ್ಲಾ ನೋವು-ನಲಿವಿನ ನಡುವೆಯೂ ಯುಗಾದಿಯನ್ನು ಆಚರಿಸೋಣ...