ಶ್ರೀ ಕ್ಷೇತ್ರ ಸುತ್ತೂರಿನ ವಿಶಿಷ್ಟ ಜಾತ್ರೆಗೆ ನೀವೂ ಬನ್ನಿ

WD
ಇತರೆಡೆಗಳಲ್ಲಿ ಆಚರಿಸುವ ಜಾತ್ರೆಗೆ ಹೋಲಿಸಿದರೆ ಮೈಸೂರಿನ ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಗೆ ನೋಡಿದರೆ ಸುತ್ತೂರಿನಲ್ಲಿ ನಡೆಯುವ ಜಾತ್ರೆ ಬರೀ ಜಾತ್ರೆಯಾಗಿರದೆ ಇದೊಂದು ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ಕತಿಕ ಮಹೋತ್ಸವಗಳ ಸಂಗಮದೊಂದಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನ ಎಂದರೆ ತಪ್ಪಾಗಲಾರದು.

ಕಪಿಲಾ ನದಿ ದಡದಲ್ಲಿ ನೆಲೆನಿಂತಿರುವ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ. ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕ್ಕತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತ, ಯಕ್ಷಗಾನ...... ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ.

ಆರು ದಿನಗಳ ಜಾತ್ರೆ: ಸುತ್ತೂರು ಜಾತ್ರೆಯು ಸುಮಾರು ಆರು ದಿನಗಳ ಕಾಲ(ಪ್ರಸಕ್ತ ವರ್ಷ ಜನವರಿ 19ರಿಂದ 24ರವರೆಗೆ) ನಡೆಯಲಿದ್ದು, ಒಂದೊಂದು ದಿನವೂ ಒಂದೊಂದು ರೀತಿಯ ವಿಶೇಷತೆಯಿರುತ್ತದೆ. ಸುತ್ತೂರಿನ ಶ್ರೀಮಠದಿಂದ ಆದಿಜಗದ್ಗುರು ಶಿವಯೋಗಿಗಳ ಉತ್ಸವಮೂರ್ತಿಯನ್ನು ಕರ್ತೃಗದ್ದುಗೆಗೆ ತರುವುದರೊಂದಿಗೆ ಜಾತ್ರೆ ಆರಂಭಗೊಳ್ಳಲಿದೆ.

ಜಾತ್ರೆಯ ಎರಡನೇ ದಿನ ಸಹಸ್ರ ಕುಂಭೋತ್ಸವ ನಡೆದರೆ, ಮೂರನೇ ದಿನದಂದು ಬೆಳಿಗ್ಗೆ ರಥೋತ್ಸವ ನಡೆಯುತ್ತದೆ. ನಾಲ್ಕನೇ ದಿನದಂದು ಸಂಜೆ ನಡೆಯುವ ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ಗಮನಸೆಳೆಯುತ್ತದೆ.

ಐದನೇ ದಿನ ರಾತ್ರಿ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವ, ಆರನೇ ದಿನ ಅನ್ನ ಬ್ರಹ್ಮೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳು ನಡೆಯುತ್ತವೆ. ಜಾತ್ರೆಯ ಸಂದರ್ಭ ನಡೆಯುವ ಕಲಾತಂಡಗಳ ಮೆರವಣಿಗೆ ಛತ್ರಿ, ಚಾಮರ, ಸೂರಾಪಾನಿ, ಗಾರುಡಿಗೊಂಬೆ, ಮರಗಾಲು ಕುಣಿತ, ನೃತ್ಯ, ವೀರಗಾಸೆ, ಡೊಳ್ಳು ಹಾಗೂ ಪೂಜಾ ಕುಣಿತ, ಕರಡಿ ಮೇಳ, ನಾದಸ್ವರ ಸೇರಿ ವಿವಿಧ ಜನಪದ ಕಲಾತಂಡಗಳೊಂದಿಗೆ ಸಾಗುತ್ತಿದ್ದರೆ ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತದೆ.

ಇನ್ನು ಜಾತ್ರೆಯ ಸಂದರ್ಭ ಶ್ರೀ ಕ್ಷೇತ್ರದಲ್ಲಿರುವ ಕರ್ತೃಗದ್ದುಗೆ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ಶಂಕರನಾರಾಯಣ, ಶ್ರೀ ವೀರಭದ್ರೇಶ್ವರ, ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ತ್ರಿಕಾಲ ಪೂಜೆ, ಮಹಾರುದ್ರಾಭಿಷೇಕ, ನವನೀತಾಲಂಕಾರ, ಹಸಿರುವಾಣಿ ಅಲಂಕಾರ ಹಾಗೂ ಗುರುಪರಂಪರೆಯ ಸಂಸ್ಮರಣೋತ್ಸವಗಳು ಕೂಡ ನಡೆಯುತ್ತವೆ.

WD
ಶಾಂತಿ, ಸಂಯಮದ ಪುಣ್ಯಕ್ಷೇತ್ರ: ಇನ್ನು ಸುತ್ತೂರಿನ ಇತಿಹಾಸದ ಬಗ್ಗೆ ನೋಡುವುದಾದರೆ ಇಲ್ಲಿನ ಶ್ರೀ ಮಠಕ್ಕೆ ಸುಮಾರು ಹತ್ತು ಶತಮಾನಗಳ ಇತಿಹಾಸವಿರುವುದನ್ನು ನಾವು ಕಾಣಬಹುದು. ಈ ಕ್ಷೇತ್ರ ಶಾಂತಿ, ಸಂಯಮ, ಸಹಬಾಳ್ವೆಯನ್ನು ನಾಡಿಗೆ ಸಾರಿದ ಕ್ಷೇತ್ರವೂ ಹೌದು. ಇದಕ್ಕೆ ಪೂರಕವಾದ ಕಥೆಯೊಂದು ಪ್ರಚಲಿತದಲ್ಲಿರುವುದನ್ನು ನಾವು ಕಾಣಬಹುದು. ಅದು ಸುಮಾರು ಒಂದು ಸಾವಿರ ವರ್ಷಗಳ ಹಿಂದಿನ ಕಾಲಾವಧಿ. ರಾಜರ ಆಡಳಿತವಿದ್ದ ದಿನಗಳು. ಎಲ್ಲೆಡೆಯೂ ರಾಜ್ಯ ವಿಸ್ತರಣೆಗಾಗಿ ರಾಜರುಗಳ ನಡುವೆ ಹೋರಾಟ ನಡೆಯುತ್ತಿತ್ತು. ಆಗಾಗ್ಗೆ ರಾಜರುಗಳು ದಂಡೆಯಾತ್ರೆ ಕೈಗೊಳ್ಳುತ್ತಿದ್ದರು. ಒಬ್ಬ ರಾಜನ ಮೇಲೆ ಮತ್ತೊಬ್ಬ ರಾಜ ಯುದ್ಧ ಸಾರುತ್ತಾ ಯುದ್ದ ಮಾಡುವುದರಲ್ಲಿಯೇ ದಿನಕಳೆಯುತ್ತಿದ್ದರು.

ಅದರಂತೆ ಆಗಿನ ಕಂಚಿಯ ರಾಜೇಂದ್ರ ಚೋಳನೂ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇಬ್ಬರೂ ವೈರಿಗಳಾಗಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಯುದ್ಧಗಳು ನಡೆಯುತ್ತಿದ್ದವು. ಒಮ್ಮೆ ಇವರಿಬ್ಬರು ಭಾರೀ ಸೈನ್ಯದೊಂದಿಗೆ ಯುದ್ಧಕ್ಕೆ ಸಜ್ಜಾಗುತ್ತಾರೆ. ಆಗ ರಾಜೇಂದ್ರ ಚೋಳ ಏರಿ ಹೊರಟಿದ್ದ ಕುದುರೆ ಗೊತ್ತುಗುರಿಯಿಲ್ಲದೆ ಓಡತೊಡಗಿತ್ತು. ಏನೇ ಮಾಡಿದರೂ ಕುದುರೆಯನ್ನು ತಡೆದು ನಿಲ್ಲಿಸುವುದಕ್ಕೆ ರಾಜನಿಗೆ ಸಾಧ್ಯವಾಗಲಿಲ್ಲ. ಹಾಗೆ ಓಡಿದ ಕುದುರೆ ಕಪಿಲಾ ನದಿ ತೀರದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳಿಗೆ ಪ್ರದಕ್ಷಿಣೆ ಹಾಕಿ ನಿಂತಿತು.

ಇದರಿಂದ ಅಚ್ಚರಿಗೊಂಡ ರಾಜಾ ರಾಜೇಂದ್ರ ಚೋಳ ಕುದುರೆಯಿಂದಿಳಿದು ಧ್ಯಾನದಲ್ಲಿ ನಿರತರಾಗಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಪಾದಕ್ಕೆರಗುತ್ತಾನೆ. ಅದೇ ವೇಳೆಗೆ ರಾಜೇಂದ್ರ ಚೋಳನ ಕುದುರೆಯನ್ನು ಹಿಂಬಾಲಿಸಿಕೊಂಡು ರಾಚಮಲ್ಲನೂ ಅಲ್ಲಿಗೆ ಬರುತ್ತಾನೆ. ತನ್ನ ಮುಂದೆ ಬಂದು ನಿಂತ ರಾಜರಿಬ್ಬರನ್ನು ಕಂಡ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು ಅವರಿಬ್ಬರಿಗೆ ವೈರತ್ವವನ್ನು ಬಿಟ್ಟು ಸಹಬಾಳ್ವೆ ನಡೆಸುವಂತೆಯೂ ಅಲ್ಲದೆ ಯುದ್ಧದಿಂದ ಆಗುವ ಸಾವು ನೋವುಗಳ ಬಗ್ಗೆ ಬೋಧಿಸುತ್ತಾರೆ. ಅವರ ಬೋಧನೆಯಿಂದ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ಮುಂದೆ ಅವರು ಯುದ್ಧವನ್ನು ಬಿಟ್ಟು ಆ ಪುಣ್ಯಕ್ಷೇತ್ರದಲ್ಲಿಯೇ ನೆಲೆಸುತ್ತಾರೆ. ಅಂತಹವೊಂದು ಪುಣ್ಯಕ್ಷೇತ್ರವೇ ಸುತ್ತೂರು ಶ್ರೀ ಕ್ಷೇತ್ರವಾಗಿದೆ.

WD
ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳಿಂದ ಆರಂಭವಾದ ಸುತ್ತೂರು ವೀರಸಿಂಹಾಸನ ಮಠವು ಹತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ. 950-1030) ಇಲ್ಲಿವರೆಗೆ ಈ ಮಠವು ಹಲವು ಜಗದ್ಗುರುಗಳನ್ನು ಕಂಡಿದ್ದು ಅವರ ವಿವರ ಹೀಗಿದೆ.

ಶ್ರೀ ಈಶಾನೇಶ್ವರ ಒಡೆಯರು (1030-1090), ಶ್ರೀ ನಿಜಲಿಂಗಶಿವಾಚಾರ್ಯರು (1090-1170), ಶ್ರೀ ಸಿದ್ಧನಂಜ ದೇಶಿಕೇಂದ್ರರು (1170-1240), ಶ್ರೀ ಕಪನಿ ನಂಜುಂಡದೇಶಿಕೇಂದ್ರರು (1240-1310), ಶ್ರೀ ಚೆನ್ನವೀರದೇಶಿಕೇಂದ್ರರು (1310-1380), ಶ್ರೀ ಸಿದ್ದಮಲ್ಲ ಶಿವಾಚಾರ್ಯರು (1380-1470), ಶ್ರೀ ಪರ್ವತೇಂದ್ರ ಶಿವಾಚಾರ್ಯರು (1470-1490), ಶ್ರೀ ಭಂಡಾರಿ ಬಸಪ್ಪ ಒಡೆಯರು (1490-1515), ಶ್ರೀ ಕೂಗಲೂರು ಶ್ರೀ ನಂಜುಂಡ ದೇಶೀಕೇಂದ್ರರು (1515-1530), ಶ್ರೀ ಘನಲಿಂಗದೇವರು (1530-1550), ಶ್ರೀ ಇಮ್ಮಡಿ ಶ್ರೀ ಶಿವರಾತ್ರೀಶ್ವರ ಸ್ವಾಮಿಗಳು (1550-1590), ಶ್ರೀ ಚೆನ್ನಬಸವದೇಶೀಕೇಂದ್ರರು (1590-1608).

ಶ್ರೀ ಗುರುನಂಜ ದೇಶೀಕೇಂದ್ರರು (1608-1641), ಶ್ರೀ ಚೆನ್ನಬಸವ ದೇವಾಚಾರ್ಯರು (1641-1713), ಶ್ರೀ ಪಂಚಾಕ್ಷರ ದೇಶೀಕೇಂದ್ರರು (1713-1730), ಶ್ರೀ ಚಿದ್ಘನ ಶಿವಾಚಾರ್ಯರು (1730-1750), ಶ್ರೀ ಚೆನ್ನವೀರ ದೇಶಿಕೇಂದ್ರರು (1750-1801), ಶ್ರೀ ಮಹಾಂತ ದೇಶೀಕೇಂದ್ರರು (1801-1842), ಶ್ರೀ ಸಿದ್ಧಮಲ್ಲ ಶಿವಾಚಾರ್ಯರು (1842-1884), ಶ್ರೀ ಶಿವರಾತ್ರಿ ದೇಶೀಕೇಂದ್ರರು (1884-1902), ಶ್ರೀ ಮಂತ್ರಮಹರ್ಷಿ ಪಟ್ಟದ ಶ್ರೀ ಶಿವರಾತ್ರಿ ಮಹಾಸ್ವಾಮಿಗಳು (1902-1926), ರಾಜಗುರುತಿಲಕ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು (1926-1986) ಸೇರಿದಂತೆ ಇಪ್ಪತ್ಮೂರು ಜಗದ್ಗುರುಗಳ ಸೇವೆಯಿಂದ ಶ್ರೀಮಠವು ಅಭಿವೃದ್ದಿ ಪಥದಲ್ಲಿ ಸಾಗುತ್ತಾ ರಾಜ್ಯ, ರಾಷ್ಟ್ತ್ರ ಹಾಗೂ ಅಂತರರಾಷ್ಟ್ತ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಗುತ್ತಿದೆ.

ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಅಭಿವೃದ್ದಿಯತ್ತ ಕೊಂಡೊಯ್ಯವಲ್ಲಿ 1986 ರಿಂದ 24ನೇ ಪೀಠಾಧಿಕಾರಿಗಳಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮುಂದಾಗಿದ್ದು, ಅವರ ಸಾರಥ್ಯದಲ್ಲಿ ಸುತ್ತೂರು ಜಾತ್ರೆ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತಿದೆ.

-ಬಿ.ಎಂ.ಲವಕುಮಾರ್
ಮೈಸೂರು

ವೆಬ್ದುನಿಯಾವನ್ನು ಓದಿ