ಬೆಂಗಳೂರು: ಭಗವಾನ್ ಮಹಾವಿಷ್ಣು ಕಲ್ಕಿ ಅವತಾರ ತಾಳುವುದು ಈ ಕಲಿಯುಗದ ಅಂತ್ಯಕ್ಕೆ. ಆ ಸಂದರ್ಭದಲ್ಲಿ ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದರ ಬಗ್ಗೆ ಇಲ್ಲಿದೆ ವಿವರ.
ಯಾವಾಗ ಭೂಮಿಯಲ್ಲಿ ಅಧರ್ಮ ತಾಂಡವವಾಡುತ್ತದೋ ಆಗ ನಾನು ಜನ್ಮವೆತ್ತಿ ಬರುತ್ತೇನೆ ಎಂದು ಶ್ರೀಮನ್ನಾರಾಯಣ ಹೇಳಿದ್ದಾನೆ. ಮಹಾವಿಷ್ಣುವಿನ 24 ಅವತಾರಗಳ ಪೈಕಿ ಕೊನೆಯ ಅವತಾರ ಕಲ್ಕಿ ಅವತಾರವಾಗಿದೆ. ಈಗ ನಾವು ಇರುವುದು ಕಲಿಯುಗದಲ್ಲಿ. ಈ ಯುಗಾಂತ್ಯವಾಗುವುದರ ಕೆಲವು ಲಕ್ಷಣಗಳಿವೆ.
ಈ ಬಗ್ಗೆ ಶ್ರೀಕೃಷ್ಣ ಏನು ಹೇಳಿದ್ದಾನೆ ಎನ್ನುವುದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಮಹಿಳೆಯರಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಯಾವಾಗ ಮಹಿಳೆಯರು 8-9 ವರ್ಷಕ್ಕೇ ಮಗುವಿಗೆ ಜನ್ಮ ನೀಡುತ್ತಾರೆ, ಯಾವಾಗ ಆಕೆ ತನ್ನ ಪತಿಗೆ ನಿಷ್ಠಾವಂತಳಾಗಿರದೇ ಹಲವು ಮದುವೆಯಾಗುತ್ತಾಳೋ, ಜನರು ಶ್ರಾದ್ಧ, ನಾಮಕರಣ, ಮದುವೆ ಮುಂತಾದ ಶಾಸ್ತ್ರ ಸಮ್ಮತವಾದ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೋ ಆಗ ಕಲ್ಕಿ ಅವತಾರ ತಾಳಲಿದ್ದಾನೆ.
ಕಲಿಯುಗದ ಅಂತ್ಯಕ್ಕೆ ಮನುಷ್ಯನ ಆಯುಷ್ಯ ಕೇವಲ 20 ವರ್ಷಕ್ಕೆ ಕೊನೆಯಾಗುತ್ತದೆ. 10-12 ವರ್ಷಕ್ಕೆ ವೃದ್ಧಾಪ್ಯದ ಚಿಹ್ನೆಗಳು ಕಂಡುಬರುತ್ತದೆ. ತಾಯಿಯು ಮಗುವಿಗೆ ಹಾಲುಣಿಸುವುದಿಲ್ಲ. ಮನುಷ್ಯರು ಸಸ್ಯಾಹಾರವನ್ನು ಇಷ್ಟಪಡದೇ ಮಾಂಸ ಭಕ್ಷ್ಯಗಳನ್ನೇ ಸೇವನೆ ಮಾಡುತ್ತಿರುತ್ತಾರೆ. ಮರಗಳು ಫಲ ನೀಡುವುದಿಲ್ಲ, ಎಲ್ಲೆಡೆ ಶಮಿ ವೃಕ್ಷ ಮಾತ್ರ ಕಂಡುಬರುತ್ತದೆ. ದೇವರೆಂದು ಪೂಜಿಸುವ ಗೋವನ್ನೇ ಕಡಿದು ತಿನ್ನುತ್ತಾರೆ. ಇಂತಹ ಸಂದರ್ಭಗಳು ಕಲಿಯುಗದ ಅಂತ್ಯ ಸಮೀಪಿಸುವ ಲಕ್ಷಣವಾಗಿದ್ದು ಆಗ ಮಹಾವಿಷ್ಣುವು ಕಲ್ಕಿ ಅವತಾರವೆತ್ತಿ ಬರುತ್ತಾನೆ ಎಂದು ನಂಬಲಾಗಿದೆ.