ದುರುಪಯೋಗದಿಂದಾಗುವ ದುರಂತಗಳ ಬಗ್ಗೆ ತಿಳಿದುಕೊಳ್ಳಿ

ಗುರುವಾರ, 24 ಜನವರಿ 2019 (09:12 IST)
ಬೆಂಗಳೂರು: ದೇವರು ನಮಗೆ ಏನೇ ಕೊಟ್ಟರೂ ಅದರಲ್ಲಿ ನ್ಯೂನ್ಯತೆಗಳನ್ನು ಹುಡುಕಿ ಕೊನೆಗೆ ಕೆಟ್ಟದಾದಾಗ ದೇವರನ್ನೇ ದೂಷಿಸುವುದು ನಮ್ಮೆಲ್ಲರ ಚಾಳಿ. ಇದನ್ನೇ ದುರುಪಯೋಗ ಎನ್ನುವುದು.


ಇದಕ್ಕೆ ಉದಾಹರಣೆಯಾಗಿ ಒಂದು ಕತೆ ಇದೆ. ಒಂದು ದಿನ ಶ್ರೀಕೃಷ್ಣ ಮತ್ತು ಅರ್ಜುನ ವಿಹಾರ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಒಬ್ಬ ಕುಡುಕ ದಾರಿಯಲ್ಲಿ ಬಿದ್ದಿದ್ದ. ಅವನನ್ನು ನೋಡಿ ಕರುಣೆ ಹೊಂದಿದ ಅರ್ಜುನ ಎತ್ತಿ ಮೇಲೆ ಕೂರಿಸಿ ಕೇಳಿದನಂತೆ ‘ನೀನ್ಯಾಕೆ ಕುಡಿತಕ್ಕೆ ಬಲಿಯಾದೆ?’ ಎಂದು. ಅದಕ್ಕೆ ಆತ ‘ಕಳೆದ ತಿಂಗಳವರೆಗೂ ನಾನು ಕುಷ್ಠರೋಗಿ. ಈಗ ಕರುಣಾಮಯಿ ಕೃಷ್ಣ ಇದನ್ನು ಗುಣ ಮಾಡಿದ. ನಾನಿನ್ನೇನು ಮಾಡಲಿ?’ ಎಂದು ಆತ ಮತ್ತೆ ಕುಸಿದು ಕುಳಿತನಂತೆ.

ಅದೇ ಸಂದರ್ಭದಲ್ಲಿ ಆ ದಾರಿಯಲ್ಲಿ ಇನ್ನೊಬ್ಬ ಕಳ್ಳ ಓಡಿ ಹೋಗುತ್ತಿದ್ದನಂತೆ. ಅವನನ್ನು ಹಿಡಿದ ಅರ್ಜುನ ‘ಏಕೆ ಕಳ್ಳತನ ಮಾಡುತ್ತಿದ್ದೀಯಾ?’ ಎಂದು ಪ್ರಶ್ನಿಸಿದನಂತೆ. ಅದಕ್ಕೆ ಆತ ‘ನನಗೆ ಕಾಲು ಇರಲಿಲ್ಲ. ಕರುಣಾಳು ಕೃಷ್ಣ ದೇವ ನನಗೆ ಕಾಲು ಕೊಟ್ಟ. ಇನ್ನೇನು ಮಾಡಲಿ?’ ಎಂದನಂತೆ.

ಹೀಗೆಯೇ ದೇವರು ಏನೇ ನಮಗೆ ಕೊಟ್ಟರೂ ಅದನ್ನು ಸದುಪಯೋಗಪಡಿಸಿಕೊಳ್ಳುವುದಕ್ಕಿಂತ ದುರುಪಯೋಗಪಡಿಸಿಕೊಂಡು ಕೊನೆಗೆ ಅದಕ್ಕೇ ದೇವರನ್ನೇ ಹೊಣೆ ಮಾಡುವುದು ನಮ್ಮ ಚಾಳಿ. ಆತ್ಮಸಂಯಮ, ದಯೆ, ಕರುಣೆ, ಭಕ್ತಿ, ನಿಸ್ವಾರ್ಥತೆ, ಜ್ಞಾನ, ದೂರದೃಷ್ಟಿ, ಮಾತಾ ಪಿತೃ ಭಕ್ತಿ, ಆಧ್ಯಾತ್ಮಿಕತೆ, ಗುರು ಭಕ್ತಿ ಇವೆಲ್ಲಾ ಇದ್ದರೆ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ದೇವರ ಕಾರುಣ್ಯದ ದುರುಪಯೋಗ ದುರಂತದ ಹಾದಿಯಾಗಬಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ