ಕೋಳಿಮೊಟ್ಟೆಯೂ ಕೂಡಾ ಚರ್ಮಕ್ಕೆ ಟಾನಿಕ್ ಇದ್ದಂತೆ ಎಂಬ ವಿಷಯ ನಿಮಗೆ ಗೊತ್ತೇ? ಹೌದು. ಇದು ಅಕ್ಷರಶಃ ಕೋಳಿಮೊಟ್ಟೆ ಎಣ್ಣೆ ಹಾಗೂ ಮಿಶ್ರ ಚರ್ಮವಿದ್ದವರಿಗೆ ಸೂಕ್ತ ಟಾನಿಕ್. ಮೊಟ್ಟೆಯ ಬಿಳಿಯ ಲೋಳೆ ಹಾಗೂ ಹಳದಿ ಲೋಳೆ ಎರಡೂ ಕೂಡಾ ಚರ್ಮವನ್ನು ನುಣುಪಾಗಿಸುತ್ತದೆ. ಮೊಡವೆ ಹಾಗೂ ಮೊಡವೆಗಳಿಂದಾಗಿರುವ ಕಲೆಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಸೂಕ್ತ ಹಾಗೂ ಸುಲಭ ಸಾಧನ ಕೂಡಾ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಸೌಂದರ್ಯ ಕಾಳಜಿಯಿದು.
ಮೊಟ್ಟೆ ಹಾಗೂ ಜೇನಿನ ಮಾಸ್ಕ್- ಒಂದು ಮೊಟ್ಟೆಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿ. ಅದಕ್ಕೆ ಆಲಿವ್ ಆಯಿಲ್ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. 15, 20 ನಿಮಿಷಗಳ ಕಾಲ ಒಣಗಲು ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ನಂತರ ಮತ್ತೆ ತಣ್ಣೀರಿನಿಂದ ಮುಖ ತೊಳೆಯಿರಿ. ಮೊಟ್ಟೆ ಚರ್ಮದ ರಂಧ್ರಗಳನ್ನು ಟೈಟ್ ಮಾಡುವ ಜತೆಗೆ ಚರ್ಮವನ್ನು ಟೋನ್ ಮಾಡುತ್ತದೆ. ಜೇನು ಚರ್ಮವನ್ನು ಮಾಯ್ಸ್ಶ್ಚರೈಸ್ ಮಾಡುವ ಗುಣ ಹೊಂದಿದ್ದು, ಮೊಡವೆ ಹಾಗೂ ಕಪ್ಪುಕಲೆಗಳನ್ನೂ ಹೋಗಲಾಡಿಸಲು ಸಹಕರಿಸುತ್ತದೆ.
ಕಣ್ಣಿನ ಕೆಳಭಾಗಕ್ಕೆ ಮೊಟ್ಟೆಯ ಬಿಳಿಲೋಳೆ ಮಾಸ್ಕ್- ಇದು ಶಾಶ್ವತ ಪರಿಹಾರ ಅಲ್ಲದಿದ್ದರೂ ತಾತ್ಕಾಲಿಕವಾಗಿ ಉತ್ತಮ ಪರಿಹಾರ. ಕಣ್ಣಿನ ಕೆಳಗೆ ಕಪ್ಪು ವರ್ತುಲದಿಂದ ಬಳಲುತ್ತಿರುವವರು ಹೊರಗೆ ಹೋಗುವ ಸಂದರ್ಭ ತಾತ್ಕಾಲಿಕವಾಗಿ ಮೊಟ್ಟೆಯ ಬಿಳಿ ಲೋಳೆಯ ಮೂಲಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೊರಗೆ ಹೋಗುವ ಮೊದಲು ಮೊಟ್ಟೆಯ ಬಿಳಿಲೋಳೆಯನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ. ಸ್ವಲ್ಪ ಒಣಗಿನ ಮೇಲೆ ಇನ್ನೊಂದು ಕೋಟ್ ಹಚ್ಚಿ. ನಂತರ ಒಣಗಿದ ಮೇಲೆ ತೊಳೆಯದೆ ಅದರ ಮೇಲೆಯೇ ಮೇಕಪ್ ಮಾಡಿ. ಇದು ತುಂಬ ಹೊತ್ತು ಇರುವುದರಿಂದ ಕೆಲವು ಗಂಟೆಗಳ ಕಾಲ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಕಾಣುವುದಿಲ್ಲ.
IFM
ಮೊಟ್ಟೆಯ ಹೇರ್ ಕಂಡೀಷನರ್- ಎಣ್ಣೆಯುಕ್ತ ಕೂದಲಿನವರಿಗೆ ಇದೊಂದು ಅತ್ಯುತ್ತಮ ಟಾನಿಕ್. ಒಂದು ಮೊಟ್ಟೆಯನ್ನು ಒಡೆದು ಅದನ್ನು ಚೆನ್ನಾಗಿ ಬೀಟ್ ಮಾಡಿ. ಅದಕ್ಕೆ ಒಂದು ಚಮಚ ಆಲಿವ್ ಆಯಿಲ್ ಹಾಕಿ ಮತ್ತೆ ಬೀಟ್ ಮಾಡಿ. ಇದಕ್ಕೆ ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಕಲಸಿ ತಲೆಗೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಣ್ಣೀರಿನಿಂದ ತೊಳೆಯಿರಿ. ಮೊಟ್ಟೆಯನ್ನು ಬೇಯಿಸಿ ಬಳಸಬೇಡಿ.
ಮೊಟ್ಟೆ ಹಾಗೂ ಬಾಳೆಹಣ್ಣಿನ ಪ್ರೋಟೀನ್ ಮಾಸ್ಕ್- ನಾಲ್ಕು ಚಮಚ ಕಾಬೂಲಿ ಚೆನ್ನಾ (ದೊಡ್ಡ ಕಡಲೆಕಾಳು) ಪುಡಿಯನ್ನು ಒಂದು ಬಾಳೆಹಣ್ಣಿನ ಜತೆ ಸೇರಿಸಿ ಪೇಸ್ಟ್ ಮಾಡಿ. ಒಂದು ಮೊಟ್ಟೆಯನ್ನು ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷದ ನಂತರ ತೊಳೆಯಿರಿ. ಇದು ಮುಖದಲ್ಲಿರುವ ಕೆಂಪು ಗುಳ್ಳೆಗಳನ್ನು ತೆಗೆದುಹಾಕುವ ಜತೆಗೆ ಮುಖದ ರಂಧ್ರಗಳನ್ನು ಟೈಟ್ ಮಾಡುತ್ತದೆ.
ಮೊಟ್ಟೆ ಹಾಗೂ ಓಟ್ಮೀಲ್ನ ಮೊಡವೆ ಟ್ರೀಟ್ಮೆಂಟ್- ಒಂದು ಮೊಟ್ಟೆಯ ಬಿಳಿಲೋಳೆಯನ್ನು ತೆಗೆದು ಅದಕ್ಕೆ ಒಟ್ಮೀಲ್ ಪೌಡರ್ ಸೇರಿಸಿ ಪೇಸ್ಟ್ ಮಾಡಿ. ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷದ ನಂತರ ಉಗುರುಬಿಸಿ ನೀರಿನ್ಲಲಿ ತೊಳೆದು ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ಮೊಡವೆಯ ತೊಂದರೆಯಿಂದ ಬಳಲುತ್ತಿರುವವರಿಗೆ ಸೂಕ್ತ.