ಮುಖದ ಸೌಂದರ್ಯಕ್ಕಾಗಿ ಫೇಸ್ ಪ್ಯಾಕ್‌ಗಳು...

ನಾಗಶ್ರೀ ಭಟ್

ಗುರುವಾರ, 4 ಜನವರಿ 2018 (16:12 IST)
ಪ್ರತಿಯೊಬ್ಬರೂ ಅಂದವಾಗಿ ಕಾಣಲು ಇಷ್ಟಪಡುತ್ತಾರೆ ಹಾಗೂ ಎಲ್ಲರೂ ಅವರಿಗೆ ಇಷ್ಟಪಡಲು ಬಯಸುತ್ತಾರೆ ಹಾಗಾಗಿ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವವರು ಸಾಕಷ್ಟು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ಅದರಲ್ಲೂ ಹೆಣ್ಣುಮಕ್ಕಳ ಕಥೆ ಹೇಳ ತೀರದು.

ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮಾರುಕಟ್ಟೆಯಲ್ಲಿ ಅನೇಕ ಕ್ರೀಮ್‌ಗಳು, ಪೌಡರ್‌ಗಳು ಲಭ್ಯವಿದೆ. ಆದರೆ ಅವು ದೀರ್ಘಕಾಲದವರೆಗೆ ಪರಿಣಾಮ ಬೀರುವುದಿಲ್ಲ ಮತ್ತು ಅವುಗಳ ಬೆಲೆಯೂ ಅಧಿಕವಾಗಿರುತ್ತದೆ. ಇದರ ಬದಲು ನಾವು ಮನೆಯಲ್ಲಿಯೇ ಕೆಲವು ಫೇಸ್ ಪ್ಯಾಕ್‌ಗಳನ್ನು ಬಳಸಿಕೊಂಡು ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ವೃದ್ಧಿಸಿಕೊಳ್ಳಬಹುದು. ಹೇಗೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಓದಿ.
 
1. ಪಪ್ಪಾಯದ ಫೇಸ್ ಪ್ಯಾಕ್:
4-5 ಚಮಚ ಪಪ್ಪಾಯಾ ಪಲ್ಪ್, 1 ಚಮಚ ಜೇನು, 2 ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ಅದನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಮುಖದ ಮೇಲ್ಭಾಗದ ಸತ್ತ ಜೀವಕೋಶಗಳನ್ನು ತೆಗೆಯುತ್ತದೆ, ಜಿಡ್ಡಿನ ಅಂಶ ಮತ್ತು ಕೊಳೆಯನ್ನು ತೆಗೆಯುತ್ತದೆ ಮತ್ತು ಮುಖವನ್ನು ಮೃದುವಾಗಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೊಮ್ಮೆ ಮಾಡುತ್ತಿರಿ.
 
2. ಬಾಳೆ ಹಣ್ಣಿನ ಫೇಸ್ ಪ್ಯಾಕ್:
1 ಬಾಳೆ ಹಣ್ಣಿನ ಪಲ್ಪ್‌ಗೆ 5-6 ಚಮಚ ಹಾಲನ್ನು ಸೇರಿಸಿ ಮುಖ ಮತ್ತು ಕತ್ತಿನ ಭಾಗಕ್ಕೆ ಒಂದು ಪ್ಯಾಕ್ ಅನ್ನು ಹಾಕಿಕೊಳ್ಳಿ. 15-20 ನಿಮಿಷಗಳ ನಂತರ ಕೋಲ್ಡ್ ವಾಟರ್‌ನಿಂದ ಮುಖವನ್ನು ತೊಳೆಯಿರಿ. ಇದು ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ ಎರಡು ಬಾರಿ ಮಾಡಿ.
 
3. ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್:
ಕಿತ್ತಳೆ ಹಣ್ಣಿನ ಪಲ್ಪ್‌ಗೆ ರೋಸ್ ವಾಟರ್ ಅನ್ನು ಸೇರಿಸಿ ಆ ಪೇಸ್ಟ್ ಅನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಕಿತ್ತಳೆಯು ಸಿಟ್ರಿಕ್ ಆ್ಯಸಿಡ್ ಮತ್ತು ವಿಟಮಿನ್ ಸಿ ಅನ್ನು ಹೊಂದಿದ್ದು ಇದು ಮುಖಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ, ತ್ವಚೆಯನ್ನು ರಿಫ್ರೆಶ್ ಮಾಡುತ್ತದೆ ಮತ್ತು ಮೊಡವೆಯನ್ನು ನಿವಾರಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ ಎರಡು ಬಾರಿ ಮಾಡಿ.
 
4. ಟೊಮೆಟೋ ಫೇಸ್ ಪ್ಯಾಕ್:
ಒಂದು ಸ್ಮ್ಯಾಶ್ ಮಾಡಿರುವ ಟೊಮೆಟೋಗೆ 2-3 ಚಮಚ ಸಕ್ಕರೆಯನ್ನು ಸೇರಿಸಿ. ಅದನ್ನು ನಿಮ್ಮ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15 ನಿಮಿಷ ಹಾಗೆಯೇ ಬಿಡಿ. ನಂತರ ನಿಮ್ಮ ತುದಿ ಬೆರಳಿನಿಂದ ಮುಖದ ಕೆಳಗಿನಿಂದ ಮೇಲಕ್ಕೆ ಸ್ವಲ್ಪ ಸಮಯ ಸ್ಕ್ರಬ್ ಮಾಡಿ ತಣ್ಣನೆಯ ನೀರಿನಿಂದ ತೊಳೆಯಿರಿ. ಇದು ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ ಮತ್ತು ಚರ್ಮವನ್ನು ಕಾಂತಿಯುತವನ್ನಾಗಿ ಮಾಡುತ್ತದೆ. ಸ್ಕ್ರಬ್ ಮಾಡುವುದರಿಂದ ಇದು ಮುಖದಲ್ಲಿನ ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ದಿನ ಬಿಟ್ಟು ದಿನ ಮಾಡುತ್ತಿರಿ.
 
5. ಗುಲಾಬಿ ಎಸಳಿನ ಫೇಸ್ ಪ್ಯಾಕ್:
ಸ್ವಲ್ಪ ಗುಲಾಬಿ ಎಸಳನ್ನು ರುಬ್ಬಿ ಅದಕ್ಕೆ 2-3 ಚಮಚ ಮುಲ್ತಾನಿ ಮಿಟ್ಟಿಯನ್ನು ಮತ್ತು 3-4 ಚಮಚ ಹಾಲನ್ನು ಸೇರಿಸಿ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಅದನ್ನು ನಿಮ್ಮ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15-20 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಗುಲಾಬಿ ಎಸಳುಗಳು ನಿಮ್ಮ ಮುಖಕ್ಕೆ ನೈಸರ್ಗಿಕವಾದ ಹೊಳಪನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಇ ಹೆಚ್ಚಾಗಿದ್ದು ಇದು ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ. ಹಾಲು ಮುಖವನ್ನು ಮೃದುವಾಗಿಸಿ ಕಾಂತಿಯುತವನ್ನಾಗಿ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ 2-3 ಬಾರಿ ಮಾಡುತ್ತಿರಿ.
 
6. ಬಾದಾಮಿ ಫೇಸ್ ಪ್ಯಾಕ್:
6-7 ಬಾದಾಮಿಯನ್ನು ಚಿಕ್ಕ ಚೂರುಗಳನ್ನಾಗಿಸಿ ಹಾಲಿನಲ್ಲಿ 5-6 ಗಂಟೆ ನೆನೆಸಿಡಿ. ನಂತರ ಅದನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ನಿಮ್ಮ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15-20 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಬಾದಾಮಿಯಲ್ಲಿ ವಿಟಮಿನ್ ಇ ಪ್ರಮಾಣ ಅಧಿಕವಿದ್ದು ತ್ವಚೆಯನ್ನು ತಾಜಾವಾಗಿರಿಸುತ್ತದೆ ಮತ್ತು ಅಗತ್ಯವಿರುವ ತೇವಾಂಶವನ್ನು ಒದಗಿಸುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಬ್ಲೀಚಿಂಗ್ ನೀಡುತ್ತದೆ ಮತ್ತು ಟ್ಯಾನ್ ಆಗಿರುವ ಮತ್ತು ಮಂದ ತ್ವಚೆಯಿಂದ ಮುಕ್ತಿ ನೀಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ 2-3 ಬಾರಿ ಮಾಡುತ್ತಿರಿ.
 
7. ಕಡಲೆ ಹಿಟ್ಟಿನ ಫೇಸ್ ಪ್ಯಾಕ್:
3-4 ಚಮಚ ಕಡಲೆ ಹಿಟ್ಟು, 2 2-3 ಚಮಚ ರೋಸ್ ವಾಟರ್, ನಿಂಬೆರಸ 1/2 ಚಮಚ, 1/2 ಚಮಚ ಅರಿಶಿಣವನ್ನು ಸೇರಿಸಿ ಪೇಸ್ಟ್ ತಯಾರಿಸಿ. ಅದನ್ನು ನಿಮ್ಮ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15-20 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಕಡಲೆ ಹಿಟ್ಟು ಮುಖವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಚರ್ಮದ ರಂಧ್ರಗಳಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಕಡಲೆ ಹಿಟ್ಟು ಮುಖದ ಚರ್ಮವನ್ನು ಬಿಗುಗೊಳಿಸಿ ಸುಕ್ಕುಗಟ್ಟದಂತೆ ತಡೆಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ 2-3 ಬಾರಿ ಮಾಡುತ್ತಿರಿ.
 
8. ಸೌತೆಕಾಯಿ ಫೇಸ್ ಪ್ಯಾಕ್:
1/4 ಸೌತೆಕಾಯಿಗೆ 2 ಚಮಚ ಅಲೋವೆರಾವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ನಿಮ್ಮ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15-20 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಸೌತೆಕಾಯಿ ನಿಮ್ಮ ಮುಖದ ಚರ್ಮವನ್ನು ತಂಪುಪಡಿಸಿ ಹಿತವಾದ ತಾಚಾತನವನ್ನು ಮತ್ತು ಮಂದ ಚರ್ಮಕ್ಕೆ ಪುನಶ್ಚೇತನವನ್ನು ತಂದುಕೊಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ ದಿನವೂ ಮಾಡುತ್ತಿರಿ.
 
ಈ ಸರಳವಾದ, ಅಧಿಕ ಶ್ರಮವಿಲ್ಲದೇ ಮಾಡಿಕೊಳ್ಳಬಹುದಾದ ಫೇಸ್ ಪ್ಯಾಕ್‌ಗಳನ್ನು ನೀವು ಕೂಡಾ ಬಳಸಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ