ಮುಖದ ಕಾಂತಿಗೆ ಕಲ್ಲಂಗಡಿ ಹಣ್ಣು ಹೇಗೆ ಉಪಯೋಗಕಾರಿ

ಸೋಮವಾರ, 15 ಅಕ್ಟೋಬರ್ 2018 (17:39 IST)
ಸೌಂದರ್ಯ ಎನ್ನುವುದು ಒಂದು ವರ. ಇದು ಕೆಲವು ವಸ್ತುಗಳು ಅಥವಾ ಮನುಷ್ಯನ ಮನಸ್ಸಿನಲ್ಲಿ ಉಂಟಾಗುವ ಒಂದು ಆಹ್ಲಾದಕರ ಭಾವನೆ. ಇದು ಬಾಹ್ಯವಾಗಿ ಗೋಚರಿಸುವ ಬಣ್ಣ, ಅಕಾರ, ರಚನೆ ಆಗಿರಬಹುದು ಅಥವಾ ಆಂತರಿಕವಾಗಿ ಇರುವ ವ್ಯಕ್ತಿತ್ವ, ಗುಣಗಳೂ ಆಗಿರಬಹುದು. ಏನೇ ಆದರೂ ಎಲ್ಲರಿಗೂ ತಾವೇ ಚೆನ್ನಾಗಿ ಕಾಣಬೇಕು ಎನ್ನುವ ಭಾವನೆಯಂತೂ ಇರುತ್ತದೆ.

ಅದರಲ್ಲಿಯೂ ಎಲ್ಲರೂ ಬಹಳ ಮುತುವರ್ಜಿ ವಹಿಸುವುದು ಮುಖದ ಸೌಂದರ್ಯಕ್ಕೆ. ಮುಖದ ಕಾಂತಿ ಹೆಚ್ಚಿಸಿಕೊಳ್ಳಲು, ಮುಖವನ್ನು ಅಂದಗಾಣಿಸಲು, ಮೊಡವೆಗಳಾಗದಿರಲು ಬಹಳ ಆರೈಕೆ ಮುಖ್ಯ. ಇದಕ್ಕೆ ಯಾವುದೋ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಕಲ್ಲಂಗಡಿ ಹಣ್ಣನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಈ ಹಣ್ಣು ಸಿಗಲು ಇಂತಹುದೇ ಕಾಲ ಇಲ್ಲವೆಂದಾದರೂ ಈ ಹಣ್ಣು ಬೇಸಿಗೆ ಕಾಲದಲ್ಲಿ ಹೆಚ್ಚು ಬಳಕೆಯಾಗುತ್ತದೆ.
 
* ಬಿರು ಬಿಸಿಲಿನಿಂದ ಮುಖದ ಚರ್ಮ ಕಪ್ಪಾಗಿದ್ದರೆ ಕಲ್ಲಂಗಡಿ ಹಣ್ಣಿನ ರಸವನ್ನು  ಚರ್ಮಕ್ಕೆ ಲೇಪನ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.
 
* ಮುಖದಲ್ಲಿ ಮೊಡವೆಗಳಾಗಿದ್ದರೆ ಕಲ್ಲಂಗಡಿ ಹಣ್ಣಿನ ಬೀಜವನ್ನು ಪುಡಿ ಮಾಡಿ ಆ ಪುಡಿಗೆ ಬಿಸಿ ನೀರನ್ನು ಬೆರೆಸಿ ಮೊಡವೆಗಳ ಮೇಲೆ 5 ರಿಂದ 10 ನಿಮಿಷಗಳ ಕಾಲ ಮಾಲಿಷ್ ಮಾಡಿದರೆ ಮೊಡವೆಗಳು ನಿವಾರಣೆಯಾಗುತ್ತದೆ.
 
* ಸಮ ಪ್ರಮಾಣದಲ್ಲಿ ಕಲ್ಲಂಗಡಿ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳುವುದರಿಂದ ಬಣ್ಣ ಕಳೆದುಕೊಂಡಿರುವ ಅಥವಾ ಹಾನಿಗೆ ಒಳಗಾದ ಚರ್ಮಕ್ಕೆ ಒಳ್ಳೆಯದು.
 
* ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಮಾಂಸಖಂಡಗಳಲ್ಲಿ ಬಿಗಿಯುಂಟಾಗಿ ನೋವಾಗಿದ್ದರೆ ಅದು ಗುಣವಾಗುತ್ತದೆ.
 
* ಕಲ್ಲಂಗಡಿ ಮತ್ತು ಮೊಸರಿನ ಮಿಶ್ರಣವನ್ನು ಮುಖಕ್ಕೆ ಬಳಸಿದರೆ ಯೌವನಯುತವಾದ ಮತ್ತು ಆರೋಗ್ಯಕಾರಿ ಚರ್ಮ ಅಷ್ಟೇ ಅಲ್ಲದೇ ಮುಖದ ಚರ್ಮವು ನಯವಾಗುವುದು.
 
* ಕಲ್ಲಂಗಡಿ ಬೀಜವನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯಲ್ಲಾದ ಹುಳಗಳು ಸಾಯುವುದಷ್ಟೇ ಅಲ್ಲದೇ ಮೊಡವೆಗಳು ಕಡಿಮೆಯಾಗುತ್ತದೆ.
 
* ಬಿಸಿಲಿನಿಂದ ಆಗಿರುವ ಸುಟ್ಟ ಕಲೆಗಳಿಗೆ ಕಲ್ಲಂಗಡಿಯಲ್ಲಿರುವ ಕೆಂಪು ಅಂಶಗಳು ನೈಸರ್ಗಿಕವಾಗಿ ಬಿಸಿಲಿನಿಂದ ರಕ್ಷಣೆಯನ್ನು ನೀಡುತ್ತದೆ.
 
* ಕಲ್ಲಂಗಡಿ ರಸಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
 
* ಕಲ್ಲಂಗಡಿ ಮತ್ತು ಸೌತೆಕಾಯಿ ಮಿಶ್ರಣವು ಬಿಸಿಲಿನಿಂದ ಆಗಿರುವ ಸುಟ್ಟ ಕಲೆಗಳನ್ನು ನಿವಾರಿಸುತ್ತದೆ. ಮತ್ತು ಸೌತೆಕಾಯಿಯು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ.
 
* ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು ತೆಗೆದು ಹಣೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ.
 
* 3 ಸಣ್ಣ ಸಣ್ಣ ಕಲ್ಲಂಗಡಿ ಹಣ್ಣಿನ ತುಂಡುಗಳಿಗೆ ಅರ್ಧ ಬಾಳೆಹಣ್ಣು ಹಾಕಿ ಮಿಶ್ರಣ ಮಾಡಿ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ನಿವಾರಣೆಯಾಗುವುದಲ್ಲದೇ ಮೊಡವೆಗಳಿಂದಾಗುವ ಉರಿಯು ಕಡಿಮೆ ಆಗುತ್ತದೆ. 
 
 ಇಂದಿನ ವಿದ್ಯಮಾನದಲ್ಲಿ ಹೆಂಗಳೆಯರಿಗೆ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕಷ್ಟದ ಮಾತೇ ಸರಿ. ವಾತಾವರಣದ ಧೂಳು, ವಾಹನದ ಹೊಗೆ, ಕಲುಷಿತ ಗಾಳಿ, ಹೆಚ್ಚು ತೈಲಯುಕ್ತವಾದ ಆಹಾರದ ಬಳಕೆಯಿಂದಾಗಿ ಮುಖದ ಮೇಲೆ ಮೊಡವೆಗಳಾಗುವುದು ಸಹಜ. ಅವು ಮೊದಲು ಸಣ್ಣ ವಿಷಯದಂತೆ ತೋರಿದರೂ ಅವುಗಳಿಂದಾಗುವ ಕಲೆಗಳು ಮುಖದ ಅಂದವನ್ನು ಕಡಿಮೆಗೊಳಿಸುತ್ತದೆ. ಆಗ ರಾಸಾಯನಿಕಯುಕ್ತವಾದ ಕ್ರೀಮ್‌ಗಳನ್ನು ಬಳಸುವುದಕ್ಕಿಂತ ನೈಸರ್ಗಿಕವಾದ ಉತ್ಪನ್ನಗಳನ್ನು ಬಳಸುವುದು ಉತ್ತಮ.

ಅದರೆ ಅದಕ್ಕೂ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅವರು ಸೂಚನೆಗಳನ್ನು ಪಾಲಿಸುವುದು ಉತ್ತಮ. ಏಕೆಂದರೆ ನೈಸರ್ಗಿಕವಾಗಿದ್ದರೂ ಕೆಲವೊಂದು ಪದಾರ್ಥಗಳು ಅಲರ್ಜಿಯನ್ನು ಉಂಟುಮಾಡುತ್ತವೆ. ಅದರಲ್ಲಿಯೂ ಮುಖದ ತ್ವಚೆಯು ಸೂಕ್ಷ್ಮವಾಗಿರುವುದರಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಮುಂದುವರೆಯುವುದು ಉತ್ತಮ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ